ಶಿವಮೊಗ್ಗ: ಇಂದು ಮತ್ತು ನಾಳೆ ದಾವಣಗೆರೆಯಲ್ಲಿ ನಡೆಯಲಿರುವ ರಾಜ್ಯದ ಕೋರ್ ಕಮಿಟಿ ಸಭೆಯಲ್ಲಿ ಪಕ್ಷ ಬಲವರ್ಧನೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಕೋರ್ ಕಮಿಟಿ ಸಭೆಯಲ್ಲಿ ಪಕ್ಷ ಬಲವರ್ಧನೆ ಬಗ್ಗೆ ಚರ್ಚೆ: ಮಾಜಿ ಸಿಎಂ ಬಿಎಸ್ವೈ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ಹಾಗೂ ಕೋರ್ ಕಮಿಟಿ ಸಭೆ ನಡೆಯುತ್ತದೆ. ಎರಡೂ ಸಭೆಗಳಲ್ಲಿ ನಾನು ಭಾಗಿಯಾಗಿ, ಬಳಿಕ ಬೆಂಗಳೂರಿಗೆ ತೆರಳುತ್ತೇನೆ ಎಂದರು. ಕೋರ್ ಕಮಿಟಿ ಸಭೆಯಲ್ಲಿ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಚರ್ಚೆ ನಡೆಸುವುದರ ಜೊತೆಗೆ ನಾಯಕರ ಸಲಹೆಗಳಿದ್ದರೆ ಅವುಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಈಗಾಗಲೇ ರಾಜ್ಯ ಪ್ರವಾಸ ಪ್ರಾರಂಭಿಸಿದ್ದು, ನಿನ್ನೆ ಮೈಸೂರಿಗೆ ಹೋಗಿ ಬಂದಿದ್ದೇನೆ. ಅಧಿವೇಶನ ಮುಗಿದ ನಂತರ ಪ್ರವಾಸ ಮುಂದುವರೆಸಲಾಗುವುದು. ಕೋರ್ ಕಮಿಟಿ ಸಭೆಯಲ್ಲಿ ಉಪಚುನಾವಣೆಯ ಬಗ್ಗೆ ಇಷ್ಟು ಬೇಗ ಚರ್ಚೆಗೆ ಬರಲಾರದು. ಸಮಯ ಬಂದಾಗ ಚರ್ಚೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಕೋರ್ ಕಮಿಟಿ, ರಾಜ್ಯ ಕಾರ್ಯಕಾರಿಣಿ ಸಭೆ: ದಾವಣಗೆರೆಗೆ ತೆರಳಲಿರುವ ಸಿಎಂ ಬೊಮ್ಮಾಯಿ
ಬೆಲೆ ಏರಿಕೆಯ ಕುರಿತು ಸದನದಲ್ಲಿ ಪ್ರತಿಪಕ್ಷಗಳು ಸುದೀರ್ಘವಾಗಿ ಚರ್ಚೆ ನಡೆಸಿವೆ. ಪ್ರತಿ ಪಕ್ಷಗಳಿಗೆ ಸಿಎಂ ಸದನದಲ್ಲಿ ತಕ್ಕ ಉತ್ತರವನ್ನು ನೀಡಿದ್ದಾರೆ. ವಾಸ್ತವಿಕವಾಗಿ ಬೆಲೆ ಏರಿಕೆ ಯಾಕೆ ಅನಿವಾರ್ಯವಾಗಿತ್ತು ಅಂತಾ ಸದನದಲ್ಲಿ ತಿಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಇದನ್ನು ಸುಧಾರಿಸುವ ನಿಟ್ಟಿನಲ್ಲಿ ಗಮನಹರಿಸಲಾಗುವುದು. ಪೆಟ್ರೋಲ್, ಡಿಸೇಲ್ ದರ ಏರಿಕೆ ಕುರಿತು ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಬಿಎಸ್ವೈ ತಿಳಿಸಿದರು.