ಶಿವಮೊಗ್ಗ:ಚೌಡೇಶ್ವರಿ ದೇವಾಲಯ ಪೂರ್ಣಗೊಳಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಭಜನೆ ಹಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ದೇವಾಲಯ ನಿರ್ಮಾಣಕ್ಕೆಂದು ದೇಗುಲದ ಹಿಂಭಾಗದ ಬೋಜನಾ ಮಂದಿರಕ್ಕೆ ದೇವಿಯನ್ನು ಸ್ಥಳಾಂತರ ಮಾಡಲಾಗಿತ್ತು. ಶಾಸಕರ ನಿರ್ಲಕ್ಷ್ಯದಿಂದ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ದೇವತೆಗೆ ನೆಲೆ ಇಲ್ಲದೆ, ದರ್ಶನಕ್ಕೆ ಬರುವ ಭಕ್ತರಿಗೆ ಸರಿಯಾದ ವ್ಯವಸ್ಥೆ ಇಲ್ಲದಾಗಿದೆ. ಪ್ರಸಾದ ನಿಲಯದಲ್ಲಿ ದೇವತೆ ಇರುವುದರಿಂದ ಪ್ರಸಾದಕ್ಕೂ ಸಮಸ್ಯೆಯಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಶಿವಮೊಗ್ಗದ ಸಿಮ್ಸ್ ಮೆಡಿಕಲ್ ಕಾಲೇಜು, ಮೆಗ್ಗಾನ್ ಭೋದನಾಸ್ಪತ್ರೆಯ ಆವರಣದಲ್ಲಿರುವ ಚೌಡೇಶ್ವರಿ ದೇವಾಲಯ ಪುರಾತನವಾಗಿದೆ. ಇದನ್ನು ಸಾಗರ ತಾಲೂಕು ವರದಹಳ್ಳಿಯ ಶ್ರೀಧರ ಸ್ವಾಮೀಜಿ 1967 ರಲ್ಲಿ ಪ್ರತಿಷ್ಟಾಪಿಸಿದ್ದರು ಎಂಬ ಪ್ರತೀತಿ ಇದೆ. ಈಗಾಗಲೇ ನೂತನ ದೇವಾಲಯ ಆರ್‌ಸಿಸಿ ಮಟ್ಟಕ್ಕೆ ಬಂದು ನಿಂತಿದ್ದರೂ ದೇವಾಲಯದ ಕಾಮಗಾರಿ ಪೂರ್ಣಗೊಳಿಸದೇ ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ಕೆ.ಬಿ.ಪ್ರಸನ್ನ ಕುಮಾರ್ ದೂರಿದರು.