ಶಿವಮೊಗ್ಗ:ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ನೆರೆಯಿಂದ ಉಂಟಾಗಿರುವ ಹಾನಿಯ ಕುರಿತಾಗಿ ಸಮರ್ಪಕವಾಗಿ ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಹೊಸ ಸಭಾಂಗಣದಲ್ಲಿ ಪ್ರವಾಹ ಪರಿಹಾರ ಕ್ರಮಗಳ ಕುರಿತಾಗಿ ಕರೆಯಲಾಗಿದ್ದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನೆರೆ ಪರಿಹಾರ ಕಾರ್ಯಗಳಿಗಾಗಿ ಪ್ರತಿ ತಹಶೀಲ್ದಾರ್ ಖಾತೆಗೆ ತಲಾ 50ಲಕ್ಷ ರೂ. ಒಂದೆರಡು ದಿನಗಳಲ್ಲಿ ಜಮಾ ಮಾಡಲಾಗುವುದು ಎಂದು ಹೇಳಿದರು.
ಪರಿಹಾರ ಕಾರ್ಯ ತ್ವರಿತಗೊಳಿಸಲು ಸೂಚನೆ
ಅತಿವೃಷ್ಟಿ ಮತ್ತು ನೆರೆಯಿಂದ ಹಾನಿಗೀಡಾಗಿರುವ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾಗೂ ಪೂರ್ಣ ಹಾಗೂ ಭಾಗಶಃ ಹಾನಿಗೀಡಾಗಿರುವ ಮನೆಗಳಿಗೆ ಪರಿಹಾರ ನೀಡುವ ಕಾರ್ಯವನ್ನು ಇನ್ನಷ್ಟು ತ್ವರಿತಗೊಳಿಸಬೇಕು. ಹಾನಿ ಸಮೀಕ್ಷೆ ಸರಿಯಾಗಿ ಮಾಡಬೇಕು. ಹಾನಿಗೀಡಾದ ಪ್ರತಿಯೊಬ್ಬರಿಗೂ ಸಮರ್ಪಕ ಪರಿಹಾರ ಸಿಗುವಂತೆ ಖಾತ್ರಿಪಡಿಸಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಸೂಚನೆ ನೀಡಿದರು.
ತೀರ್ಥಹಳ್ಳಿ ತಾಲೂಕಿನಲ್ಲಿ ನೆರೆ ಹಾವಳಿಯಿಂದ ಹಾನಿಗೀಡಾಗಿರುವ ಮನೆಗಳ ಮತ್ತು ಕೃಷಿ ಮತ್ತು ತೋಟಗಾರಿಕಾ ಪ್ರದೇಶಗಳ ಬಗ್ಗೆ ಸರಿಯಾಗಿ ಸಮೀಕ್ಷೆ ನಡೆಸಲಾಗಿಲ್ಲ. ತೀರ್ಥಹಳ್ಳಿಯಲ್ಲಿ ಕೆಲವು ಮನೆಗಳು ಸಂಪೂರ್ಣ ಕುಸಿದಿದ್ದರೂ ಅದನ್ನು ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿದೆ ಎಂದು ಶಾಸಕ ಅರಗ ಜ್ಞಾನೇಂದ್ರ ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು, ಸಮರ್ಪಕ ಮಾಹಿತಿ ಒದಗಿಸದ ಕಂದಾಯ ಅಧಿಕಾರಿಗೆ ನೋಟಿಸ್ ಜಾರಿಗೊಳಿಸುವಂತೆ ಹಾಗೂ ತಕ್ಷಣ ಸಮರ್ಪಕ ಮಾಹಿತಿಯನ್ನು ಒದಗಿಸುವಂತೆ ಸೂಚನೆ ನೀಡಿದರು.