ಹೆಚ್ಡಿಕೆ ಹೇಳಿಕೆಗೆ ಸಿ.ಟಿ.ರವಿ ಪ್ರತಿಕ್ರಿಯೆ ಶಿವಮೊಗ್ಗ: ಬಿಜೆಪಿಯ ಜನಬೆಂಬಲ ಸಿಗುತ್ತಿರುವುದನ್ನು ನೋಡಿ ಹತಾಶರಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಮುಂದಿನ ಸಿಎಂ ವಿಚಾರವಾಗಿ ಹೆಚ್ಡಿಕೆ ನೀಡಿರುವ ಹೇಳಿಕೆ ಬಗ್ಗೆ ಸೊರಬ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಜನ ಬೆಂಬಲ ಸಿಗುತ್ತಿರುವುದು ನೋಡಿ ಅವರು ಹತಾಶರಾಗಿದ್ದಾರೆ.
ಹಾಸನದಲ್ಲಿ ಒಂದು ಕ್ಷೇತ್ರ ಬಿಜೆಪಿಗೆ ಬಂದಿರುವುದನ್ನು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈಗ ನಮ್ಮ ಸಮೀಕ್ಷೆಯಲ್ಲಿ ಹಾಸನದ 7 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ತಿಳಿದು ಬಂದಿದೆ ಇದರಿಂದ ಅವರು ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದರು.
ನಮ್ಮ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗುವ ಯೋಗ್ಯತೆ ಇರುತ್ತದೆ. ಪ್ರಧಾನಮಂತ್ರಿ ನರೇಂದ್ರ ಅವರ ಕುಟುಂಬಕ್ಕೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಯಡಿಯೂರಪ್ಪ ಅವರು ಸಿಎಂ ಅಗಿದ್ದರು, ಅವರದ್ದೂ ಸಾಮಾನ್ಯ ಕುಟುಂಬ. ಅವರು ಕುಟುಂಬದಲ್ಲಿ ಯಾರು ಎಂಪಿ, ಎಂಎಲ್ಎ ಆಗಿರಲಿಲ್ಲ. ಅವರದ್ದು ರೈತ ಕುಟುಂಬವಾಗಿತ್ತು. ಪಕ್ಷ ಅವರನ್ನು ಸಿಎಂ ಕೂಡಾ ಮಾಡಿದೆ. ಅಲ್ಲದೇ ಸಾಮಾನ್ಯ ಚಹಾ ಮಾರುವ ಕುಟುಂಬದವರನ್ನು ಕರೆದು ಕೊಂಡು ಸಿಎಂ ಮಾಡಿ ಪ್ರಧಾನ ಮಂತ್ರಿಯನ್ನಾಗಿಸಿತು. ಬಿಜೆಪಿಯಲ್ಲಿ ಪ್ರತಿ ಕಾರ್ಯಕರ್ತನಿಗೂ ಯಾವ ಸ್ಥಾನಕ್ಕಾದರೂ ಹೋಗುವ ಮುಕ್ತ ಅವಕಾಶ ಇರುತ್ತದೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರು ಉನ್ನತ ಸ್ಥಾನಕ್ಕೆ ಹೋಗಬಹುದು:ನಮ್ಮಲ್ಲಿ ಸಾಮಾನ್ಯ ಕಾರ್ಯಕರ್ತರು ಸಹ ಎತ್ತರದ ಸ್ಥಾನಕ್ಕೂ ಏರಬಹುದು. ನಾನಾಗಲಿ, ನಳೀನ ಕುಮಾರ್ ಕಟೀಲ್, ಪ್ರಹ್ಲಾದ್ ಜೋಶಿ ಅವರು ಮೈಕ್ ಹಿಡಿದು, ಮನೆ ಮನೆಗೆ ಕರಪತ್ರ ಹಂಚಿ, ಪೋಸ್ಟರ್ ಅಂಟಿಸಿದ ಕಾರ್ಯಕರ್ತರು. ನಮಗೆ ಇಲ್ಲಿಯ ವರೆಗೂ ಪಕ್ಷ ಬೆಳೆಸಿದೆ. ಆದರೆ, ಜೆಡಿಎಸ್ ಪಾರ್ಟಿಯಲ್ಲಿ ಹಾಗಿಲ್ಲ. ಹಾಸನ ಎಂದರೆ ಭವಾನಿ ರೇವಣ್ಣ ಅವರೆ ಅಭ್ಯರ್ಥಿ ಆಗಬೇಕು.
ಎಂಎಲ್ಸಿ ಅಂದ್ರೆ ಸೂರಜ್ ರೇವಣ್ಣನಿಗೆ ನೀಡಬೇಕು. ಎಂಪಿ ಟಿಕೆಟ್ ಅಂದ್ರೆ, ಪ್ರಜ್ವಲ್ ರೇವಣ್ಣನಿಗೆ ನೀಡಬೇಕು. ರಾಮನಗರ ಬಿಟ್ಟು ಕೊಡಬೇಕು ಅಂದರೆ, ಅನಿತಾ ಕುಮಾರಸ್ವಾಮಿ ಅವರಿಗೆ ನೀಡಬೇಕು ಅಥವಾ ನಿಖಿಲ್ ಕುಮಾರಸ್ವಾಮಿ ಅವರಿಗೆ ಬಿಟ್ಟು ಕೊಡಬೇಕು. ಅದು ಅಲ್ಲಿ ತ್ಯಾಗ ಎಂದೆನ್ನಿಸಿಕೊಳ್ಳುತ್ತದೆ ಇದು ಅವರ ಪರಿಭಾಷೆ. ಜೆಡಿಎಸ್ ಅಲ್ಲಿ ದೂಡ್ಡಗೌಡ್ರಿಗೆ, ಸಣ್ಣ ಗೌಡ್ರಿಗೆ ಹಾಗೂ ಮರಿ ಗೌಡ್ರಿಗೆ ಮಾತ್ರ ಅವಕಾಶ ಇರೂದು ಎಂದು ಟೀಕಿಸಿದರು.
ರಾಜಕಾರಣಲ್ಲಿ ನಾವು ನೀಡುವ ಕಾರ್ಯಕ್ರಮಗಳು ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಯಬೇಕು. ವ್ಯಕ್ತಿಗತ ಟಾರ್ಗೆಟ್ ಮಾಡಬಾರದು. ನಮ್ಮ ಯೋಜನೆ, ಚಿಂತನೆ ಪ್ರಾಣಾಳಿಕೆಗಳ ಕುರಿತು ಚರ್ಚೆ ನಡೆಯಬೇಕು. ದಿಕ್ಕು ತಪ್ಪಿಸುವ ರಾಜಕಾರಣಕ್ಕಿಂತ, ಅಭಿವೃದ್ದಿಯ ಕುರಿತು ಚರ್ಚೆ ಆಗಬೇಕೆಂದು ಬಯಸುತ್ತೆವೆ ಎಂದರು. ನಮ್ಮ ಸರ್ಕಾರ ಅಭಿವದ್ದಿ ಮಾಡದೆ ಹೋದ್ರೆ ಓಟ್ ಕೊಡುವುದು ಬೇಡ. ಅದೇ ಅಭಿವೃದ್ದಿ ಯೋಜನೆಗಳನ್ನು ಮಾಡಿದ್ರೆ ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ. ಅಭಿವೃದ್ದಿಯ ಕುರಿತು ಬಹಿರಂಗ ಚರ್ಚೆ ನಡೆಯಲಿ, ಮಾಧ್ಯಮದವರೇ ಚರ್ಚೆ ಏರ್ಪಡಿಸಲಿ ಎಂದರು.
ಇದನ್ನೂ ಓದಿ:ವಿದ್ಯುತ್ ಚಾಲಿತ ವಾಹನ ಉತ್ಪಾದನೆಯಲ್ಲಿ ದೇಶದಲ್ಲಿಯೇ ನಂ.1 ಆಗುವ ಗುರಿ ನಮ್ಮದು: ಸಿಎಂ ಬೊಮ್ಮಾಯಿ