ಆರೋಪಿಗಳ ಬಂಧನದ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟನೆ ಶಿವಮೊಗ್ಗ: ಆಯನೂರಿನ ಬಾರ್ ಕ್ಯಾಷಿಯರ್ ಹತ್ಯೆ ಕೇಸ್‌ನ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಒಬ್ಬ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ. ನಿನ್ನೆ ರಾತ್ರಿ ಶಿವಮೊಗ್ಗ ತಾಲೂಕು ಅಯನೂರು ಗ್ರಾಮದ ನವರತ್ನ ಬಾರ್ನ ಕ್ಯಾಷಿಯರ್ ಸಚಿನ್ ಕುಮಾರನನ್ನು ಸತೀಶ್, ಅಶೋಕ್ ನಾಯ್ಕ ಹಾಗೂ ನಿರಂಜನ ಎಂಬುವರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಮೂವರನ್ನು ಬಂಧಿಸಲು ಎಸ್ಪಿ ಪ್ರತ್ಯೇಕ ತಂಡ ರಚನೆ ಮಾಡಿದ್ದರು.
ಇಂದು ಸತೀಶ್ ಎಂಬ ಆರೋಪಿಯನ್ನು ಹಿಡಿಯಲು ರಾಜು ರೆಡ್ಡಿ ತಮ್ಮ ಸಿಬ್ಬಂದಿಯಾದ ಪ್ರವೀಣ್ ಹಾಗೂ ಶಿವರಾಜ್‌ರನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಸತೀಶ್ ಪೊಲೀಸ್ ಸಿಬ್ಬಂದಿಯಾದ ಶಿವರಾಜ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಇದೇ ವೇಳೆ ತಡೆಯಲು ಬಂದ ಪ್ರವೀಣ್ ಮೇಲೂ ಸಹ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಇದರಿಂದ ಪಿಎಸ್ಐ ರಾಜು ರೆಡ್ಡಿ ಆರೋಪಿ ಸತೀಶನಿಗೆ ಶರಣಾಗಲು ಸೂಚಿಸಿದ್ದಾರೆ. ಆದರೆ ಆತ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಸಿಬ್ಬಂದಿಗಳ ರಕ್ಷಣೆಗಾಗಿ ಸತೀಶನ ಕಾಲಿಗೆ ಗುಂಡು ಹಾರಿದ್ದಾರೆ.
ಸತೀಶ್ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಎರೆಕೊಪ್ಪ ಅರಣ್ಯ ಪ್ರದೇಶದಲ್ಲಿದ್ದ ಮಾಹಿತಿ ಮೇರೆಗೆ ಪೊಲೀಸರು ಹಿಡಿಯಲು ತೆರಳಿದಾಗ ಘಟನೆ ನಡೆದಿದೆ. ಉಳಿದ ಆರೋಪಿಗಳಾದ ಅಶೋಕ ನಾಯ್ಕ ಹಾಗೂ ನಿರಂಜನ ಎಂಬವರನ್ನು ಬೇರೆ ಬೇರೆ ತಂಡಗಳು ಸೆರೆ ಹಿಡಿದಿವೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಭಾನುವಾರ ರಾತ್ರಿ ನಡೆದ ಘಟನೆ: ಬಾರ್ನ ಕ್ಯಾಷಿಯರ್ ಸಚಿನ್ ಕುಮಾರ ನಿನ್ನೆ ರಾತ್ರಿ ಕುಡಿಯಲು ಬಂದಿದ್ದ ಸತೀಶ್, ಅಶೋಕ್ ನಾಯ್ಕ ಹಾಗೂ ನಿರಂಜನ ಎಂಬವರಿಗೆ ಬಾರ್ ಮುಚ್ಚುವ ಟೈಮ್ ಆಯ್ತು ಬೇಗ ಹೊರಡಿ ಎಂದಿದ್ದಾರೆ. ಇದಕ್ಕೆ ಕೋಪಗೊಂಡ ಮೂವರು ಕ್ಯಾಷಿಯರ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಬಾರ್ನ ಇತರೆ ಕೆಲಸಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ಎದುರೇ ಸಚಿನ್ ಕುಮಾರ್ನ ಎದೆ ಮತ್ತು ಪಕ್ಕೆಲುಬಿನ ಜಾಗಕ್ಕೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದರು. ಪೊಲೀಸರು ಸಚಿನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನ ಆಗಿರಲಿಲ್ಲ.
ಮೂವರು ತಪ್ಪಿಸಿಕೊಂಡ ಸಂಬಂಧ ಎಸ್ಪಿ ಆರೋಪಿಗಳ ಬಂಧನಕ್ಕೆ ಪೊಲೀಸರಿಗೆ ಚುರುಕಾದ ಕಾರ್ಯಾಚರಣೆಗೆ ಆದೇಶ ನೀಡಿದ್ದರು. ಅಲ್ಲದೇ ಮೂರು ತಂಡಗಳನ್ನು ಮಾಡಿದ್ದರು. ಪೊಲೀಸರು ಯಶಸ್ವಿ ಕಾರ್ಯಾಚರಣೆ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಬಾರ್ ಮುಚ್ಚುವ ಸಮಯವಾಯ್ತು ಅಂದದಷ್ಟೇ.. ಶಿವಮೊಗ್ಗದಲ್ಲಿ ಪೊಲೀಸರ ಮುಂದೆಯೇ ಕ್ಯಾಷಿಯರ್ ಕೊಲೆ!