ಶಿವಮೊಗ್ಗ:ರಾಜ್ಯದಲ್ಲಿ ಮುಂದಿನ 3 ವರ್ಷಗಳಲ್ಲಿ ಏತ ನೀರಾವರಿ ಮೂಲಕ ರಾಜ್ಯದ ಎಲ್ಲಾ ಕೆರೆಗಳನ್ನು ತುಂಬಿಸುವ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
ಶಿಕಾರಿಪುರದಲ್ಲಿ 1,100 ಕೋಟಿ ರೂ. ಮೊತ್ತದ ಏತ ನೀರಾವರಿ ಯೋಜನೆ ಸೇರಿದಂತೆ ಒಟ್ಟು 1,277 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನದಿಯ ನೀರನ್ನು ಏತ ನೀರಾವರಿ ಮೂಲಕ ಮೇಲೆತ್ತಿ ಕೆರೆಗಳ ಮೂಲಕ ರೈತರ ಹೊಲಗಳನ್ನು ತುಂಬಿಸಲಾಗುವುದು. ಆವರ್ತ ನಿಧಿಯನ್ನು ರೈತರ ಉತ್ಪನ್ನಗಳಿಗೆ ಉತ್ತಮ ಬೆಂಬಲ ಬೆಲೆ ಒದಗಿಸಲಾಗುವುದು ಎಂದರು.
ಪುರದಕೆರೆ ಸಮೀಪ ತುಂಗಭದ್ರಾ ನದಿಯಿಂದ ಏತ ನೀರಾವರಿ ಮೂಲಕ ಶಿಕಾರಿಪುರ ತಾಲೂಕಿನ ಉಡುಗಣಿ, ತಾಳಗುಂದ, ಹೊಸೂರು ಹೋಬಳಿ ಕೆರೆಗಳನ್ನು ತುಂಬಿಸುವ 850 ಕೋಟಿ ರೂ. ಯೋಜನೆಯಿಂದ 110 ಗ್ರಾಮಗಳ 186 ಕೆರೆಗಳನ್ನು ತುಂಬಿಸಲಾಗುತ್ತಿದೆ. ಇದೇ ರೀತಿ ಶಿವಮೊಗ್ಗ ಹೊಸಹಳ್ಳಿ ಸಮೀಪದ ತುಂಗಾ ನದಿಯಿಂದ ಏತ ನೀರಾವರಿ ಮೂಲಕ ಶಿವಮೊಗ್ಗ ಗ್ರಾಮಾಂತರ ಕೆರೆಗಳಿಗೆ ಹಾಗೂ ಶಿಕಾರಿಪುರ ಅಂಜನಾಪುರ ಜಲಾಶಯಕ್ಕೆ ನೀರು ಒದಗಿಸುವ 250 ಕೋಟಿ ಮೊತ್ತದ ಏತ ನೀರಾವರಿ ಯೋಜನೆಯಿಂದ 50 ಗ್ರಾಮಗಳ 75 ಕೆರೆಗಳನ್ನು ತುಂಬಿಸಲಾಗುತ್ತಿದೆ. ಮುಂದಿನ ಒಂದು ವರ್ಷದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಹೇಳಿದರು.