ಶಿವಮೊಗ್ಗ: ಏಕಾಏಕಿ ಎರಡು ಸಾವಿರ ಅಡಿಕೆ ಸಸಿಗಳನ್ನು ಕಟ್ ಮಾಡಿದ ಅರಣ್ಯ ಇಲಾಖೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತೀರ್ಥಹಳ್ಳಿಯಲ್ಲಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಪಾದಯಾತ್ರೆ ನಡೆಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಬೀಸು ಗ್ರಾಮದ ರಂಜನ್ ಎಂಬುವರು ತಮ್ಮ ಅಡಿಕೆ ತೋಟ ಪಕ್ಕದ ಅರಣ್ಯ ಭೂಮಿಯಲ್ಲಿ ಅಡಿಕೆ ಸಸಿಯನ್ನು ನೆಟ್ಟಿದ್ದರು. ಆದರೆ ಅರಣ್ಯ ಇಲಾಖೆಯ ರೇಜರ್ ಅನಿಲ ಎಂಬುವರು ರಂಜನ್ ಅವರಿಗೆ ಯಾವುದೇ ನೋಟಿಸ್ ನೀಡದೆ ತಮ್ಮ ಸಿಬ್ಬಂದಿ ಜೊತೆಗೆ ಬಂದು ಏಕಾಏಕಿ ಸುಮಾರು 2 ಸಾವಿರ ಸಸಿಗಳನ್ನು ಕಿತ್ತು ಹಾಕಿದ್ದರು. ಅರಣ್ಯ ಇಲಾಖೆಯವರ ಈ ಕೃತ್ಯವನ್ನು ಖಂಡಿಸಿ ಕಿಮ್ಮನೆ ರತ್ನಾಕರ್ ಬೀಸು ಗ್ರಾಮದಿಂದ ತೀರ್ಥಹಳ್ಳಿ ಪಟ್ಟಣದ ಅರಣ್ಯ ಇಲಾಖೆ ಕಚೇರಿವರೆಗೂ ಸುಮಾರು 25 ಕಿ.ಮೀ. ಪಾದಯಾತ್ರೆ ನಡೆಸಿದರು.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ದ್ವೇಷದ ರಾಜಕಾರಣ
ತೀರ್ಥಹಳ್ಳಿಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ ನಡೆಯಿತು. ಈ ವೇಳೆ ಬೀಸು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಂಜನ್ ಪತ್ನಿ ಸುಪ್ರೀತ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಇವರನ್ನು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಡೆಯವರು ಸಾಕಷ್ಟು ಒತ್ತಡ ಹಾಕಿದ್ದರು ಎನ್ನಲಾಗಿದೆ. ಆದರೆ ಸುಪ್ರೀತ ರಂಜನ್ ಕಣದಿಂದ ಹಿಂದೆ ಸರಿಯದ ಕಾರಣ ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ ಅವರು ರೇಜರ್ ಅನಿಲ್ ಮೂಲಕ ಅಡಿಕೆ ಸಸಿಯನ್ನು ಕಿತ್ತು ಹಾಕಿಸಿದ್ದಾರೆ ಎನ್ನಲಾಗ್ತಿದೆ.
ಅರಣ್ಯ ಇಲಾಖೆ ನಡೆ ಖಂಡಿಸಿ ಕಿಮ್ಮನೆ ರತ್ನಾಕರ್ ಪಾದಯಾತ್ರೆ ಅರಣ್ಯ ಅಧಿಕಾರಿಗಳ ಈ ಕಾರ್ಯಾಚರಣೆಯಲ್ಲಿ ನನ್ನ ಪಾತ್ರವೇನೂ ಇಲ್ಲ. ಪಾದಯಾತ್ರೆ ರಾಜಕೀಯ ದುರುದ್ದೇಶದಿಂದ ನಡೆಸಲಾಗುತ್ತಿದೆ. ಮಾಜಿ ಸಚಿವರು ಪಾದಯಾತ್ರೆ ನಡೆಸಿಯೇ ಜನರಿಂದ ದೂರವಾಗುತ್ತಿದ್ದಾರೆ. ಇದು ಅವರ ರಾಜಕೀಯ ದ್ವೇಷವನ್ನು ತೋರಿಸುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.