ಶಿವಮೊಗ್ಗ:ವಿಜಯೇಂದ್ರ ವರುಣಾ ಕ್ಷೇತ್ರ ದಿಂದ ಸ್ಪರ್ಧಿಸುವುದಿಲ್ಲ ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು. ಶಿಕಾರಿಪುರದ ಕುಮದ್ವತಿ ಕಾಲೇಜು ಮೈದಾನದಲ್ಲಿ ಸೋಮವಾರ ಬಿಜೆಪಿ ಪಕ್ಷದಿಂದ ಆಯೋಜಿಸಿದ್ದ ಗ್ರಾಮಾಂತರ ಭಾಗದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನ ಜನತೆಯಲ್ಲಿ ಗೊಂದಲಬೇಡ, ವಿಜಯೇಂದ್ರ ಶಿಕಾರಿಪುರದಿಂದಲೇ ಸ್ಪರ್ಧಿಸುತ್ತಾರೆ, ಮೈಸೂರಿನ ವರುಣಕ್ಷೇತ್ರ ದಿಂದ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕಲ್ಲು ತೂರಾಟ ಪ್ರಕರಣ ಮರೆತುಬಿಡೋಣ:ಕಲ್ಲು ತೂರಾಟ ಆಗಿರುವ ಬಗ್ಗೆ ಕಾಂಗ್ರೆಸ್ನವರು ಮಾಡಿದರು, ಇವರು ಮಾಡಿದರು, ಅವರು ಮಾಡಿದರು ಅಂತ ಬೇಡ. ಅದನ್ನು ಮರೆತು ಒಂದೇ ತಾಯಿಯ ಮಕ್ಕಳಂತೆ ಬದುಕೋಣ. ನಾನು ಬದುಕಿರುವವರೆಗೂ ಬಂಜಾರ, ಭೋವಿ ಹಾಗೂ ಕೊರಚ ಸಮುದಾಯವನ್ನು ಎಸ್ಟಿ ಪಟ್ಟಿಯಿಂದ ಕೈ ಬಿಡಲ್ಲ. ಮೀಸಲಾತಿ ಕುರಿತು ಈಗಾಗಲೇ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರ ಜೊತೆ ಮಾತನಾಡಿದ್ದೇನೆ. ಈ ಬಗ್ಗೆ ರಾಜ್ಯದಲ್ಲಿ ಉದ್ದೇಶ ಪೂರ್ವಕವಾಗಿ ಗೊಂದಲವನ್ನುಂಟು ಮಾಡಲಾಗುತ್ತಿದೆ. ಇದು ಕೇವಲ ಶಿಕಾರಿಪುರದ ಸಮಸ್ಯೆ ಅಲ್ಲ, ರಾಜ್ಯದ ಜ್ವಲಂತ ಸಮಸ್ಯೆ. ಇದರಿಂದ ಈ ಸಮುದಾಯದವರನ್ನು ಎಸ್ಟಿ ಪಟ್ಟಿಯಿಂದ ಕೈ ಬಿಡಬಾರದು ಎಂದು ಶಾ ಅವರಿಗೆ ಹೇಳಿದ್ದೇನೆ. ಇದಕ್ಕೆ ಅವರು ಒಪ್ಪಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯದಲ್ಲಿ ಪಕ್ಷಸಂಘಟಿಸುವ ಮೂಲಕ ಜನಪ್ರಿಯ ಯುವನಾಯಕರಾಗಿ ಹೊರಹೊಮ್ಮಿದ್ದಾರೆ. ನನಗೆ ರಾಜಕೀಯ ಜನ್ಮ ನೀಡಿದ ಶಿಕಾರಿಪುರ ಕ್ಷೇತ್ರದಿಂದಲೇ ವಿಜಯೇಂದ್ರ ಸ್ಪರ್ಧೆ ನಡೆಸಲಿದ್ದಾರೆ. ಬೂತ್ ಮಟ್ಟದಲ್ಲಿ ಪಕ್ಷಸಂಘಟಿಸುವ ಮೂಲಕ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ನನಗೆ ಹಾಗೂ ಸಂಸದ ರಾಘವೇಂದ್ರಗೆ ಆಶೀರ್ವದಿಸಿದಂತೆ ವಿಜಯೇಂದ್ರಗೂ ನೀವು ಆಶೀರ್ವಾದ ಮಾಡಬೇಕು ಎಂದು ಬಿಎಸ್ವೈ ಮನವಿ ಮಾಡಿದರು.
ಮನವೊಲಿಸಿ ಮತಹಾಕಿಸಬೇಕು: ಪಕ್ಷದ ಬಗ್ಗೆ ಬೇಸರ ಹಾಗೂ ಅಸಮಾಧಾನ ಇದ್ದವರ ಮನವೊಲಿಸಿ ಮತಹಾಕಿಸಬೇಕು. ಚುನಾವಣೆ ಸ್ಪರ್ಧಿಸಲು ಬಿಜೆಪಿ ಅಂತಿಮಪಟ್ಟಿ ಸಿದ್ದವಾಗುತ್ತಿದ್ದು, ಎರಡುಮೂರು ದಿನದಲ್ಲಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗಲಿದೆ. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾತಿ, ಧರ್ಮ ನೋಡದೇ ಎಲ್ಲರ ಅಭಿವೃದ್ಧಿಗೆ ಪೂರಕವಾದ ಯೋಜನೆ ನೀಡಿದ್ದೇನೆ. ನೀರಾವರಿ ಯೋಜನೆ ಸೇರಿದಂತೆ ತಾಲೂಕಿನ ಜನರ ಅಪೇಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯ ನಡೆಸಿದ ತೃಪ್ತಿ ನನಗೆ ಇದೆ ಎಂದು ಇದೇ ವೇಳೆ ಹೇಳಿದರು.