ಶಿವಮೊಗ್ಗ: ಜಿಲ್ಲೆಯ ನಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರನ್ನು ನೇಮಿಸಬೇಕು ಎಂದು ಆಗ್ರಹಿಸಿ ಸ್ವತಃ ಗ್ರಾಪಂ ಅಧ್ಯಕ್ಷ ಕರುಣಾಕರ ಶೆಟ್ಟಿ ಅವರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆ ಕಟ್ಟಡ ಮೇಲೇರಿ ಪ್ರತಿಭಟನೆ ನಡೆಸಿದರು. ನಗರದ ಪ್ರಾಥಮಿಕ ಆರೋಗ್ಯದಲ್ಲಿ ಹಲವು ವರ್ಷಗಳಿಂದಲೂ ಖಾಯಂ ವೈದ್ಯರಿಲ್ಲ. ಇದರಿಂದ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸರಿಯಾದ ಸಮಯಕ್ಕೆ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದ ನಗರ ಗ್ರಾಮದ ಹಾಗೂ ಸುತ್ತಲಿನ ಗ್ರಾಮದ ಕಡುಬಡವರು ತೀವ್ರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ತಕ್ಷಣ ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕು. ಅಸ್ಪತ್ರೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಅವರು ಆಸ್ಪತ್ರೆ ಕಟ್ಟಡ ಮೇಲೆ ಕುರಿತು ಆಗ್ರಹಿಸಿದ್ದಾರೆ.
ನಲವತ್ತು ಸಾವಿರ ಜನಸಂಖ್ಯೆ ಇದ್ದು ಖಾಯಂ ವೈದ್ಯರಿಲ್ಲ:ನಗರ ಹೋಬಳಿಯಲ್ಲಿ ಸುಮಾರು 30-40 ಸಾವಿರ ಜನಸಂಖ್ಯೆ ಇದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬರೇ ಒಬ್ಬ ಖಾಯಂ ವೈದ್ಯಾಧಿಕಾರಿಗಳಿಲ್ಲ. ಇದು ಮುಳುಗಡೆ ಪ್ರದೇಶದ ಸ್ಥಳವಾಗಿದ್ದು, ಇಲ್ಲಿಯ ಜನರು ಬಹಳಷ್ಟು ಬಡವರಿದ್ದು, ಮಣಿಪಾಲ, ಮಂಗಳೂರಿಗೆ ಹೋಗಿ ಚಿಕಿತ್ಸೆಗೆ ಖರ್ಚು ಮಾಡುವಷ್ಟು ಹಣವಿಲ್ಲ.
ನಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರನ್ನು ನೇಮಕಮಾಡುವಲ್ಲಿ ಜಿಲ್ಲಾ ಹಾಗೂ ತಾಲೂಕು ವೈದ್ಯಾಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಇಲ್ಲಿ ಖಾಯಂ ವೈದ್ಯರನ್ನು ನೇಮಕ ಮಾಡಿದರೆ ತಾಲೂಕು ವೈದ್ಯಾಧಿಕಾರಿಗಳ ಅಧಿಕಾರಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಖಾಯಂ ವೈದ್ಯರನ್ನು ನೇಮಕ ಮಾಡುತ್ತಿಲ್ಲ ಎಂದು ಆರೋಪಿಸಿದರು. ಆಸ್ಪತ್ರೆಗೆ ಖಾಯಂ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು. ನಮ್ಮ ಜನಕ್ಕೆ ಉತ್ತಮ ವೈದ್ಯಕೀಯ ಸೇವೆ ಲಭಿಸುವಂತಗಬೇಕು. ಜಿಲ್ಲಾ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಅಗಮಿಸುವ ತನಕ ಪ್ರತಿಭಟನೆ ನಡೆಸುವುದಾಗಿ ಗ್ರಾ ಪಂ ಅಧ್ಯಕ್ಷ ಕರುಣಾಕರ ಶೆಟ್ಟಿ ಆಗ್ರಹಿಸಿದ್ದಾರೆ.