ರಾಮನಗರ:ಕಡಿಮೆ ಅಂಕದಿಂದ ಎಲ್ಎಲ್ಬಿ ಸೀಟ್ ಸಿಗದ ಹಿನ್ನೆಲೆಯಲ್ಲಿ ಮನನೊಂದು ಯುವಕನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಘಟನೆ ರಾಮನಗರದ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಕಿಗೆ ಬಂದಿದೆ.
ಗೋಪಾಲ್ (22) ಎಂಬ ಯುವಕನೇ ಆತ್ಮಹತ್ಯೆಗೆ ಶರಣಾಗಿದ್ದು, ಈತ ಹಾಸನ ಜಿಲ್ಲೆಯ ಕುಂಬೇನಹಳ್ಳಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಇಲ್ಲಿನ ನೆಲಮಂಗಲ - ಕುಣಿಗಲ್ ಹೆದ್ದಾರಿಯ ಪಕ್ಕದಲ್ಲೇ ಪಲ್ಸರ್ ಬೈಕ್ ನಿಲ್ಲಿಸಿ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನು ಗಮನಿಸಿರುವ ಸ್ಥಳೀಯರು ಮೃತನ ಮೊಬೈಲ್ನಿಂದ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಕಡಿಮೆ ಅಂಕದಿಂದ ಸಿಗದ ಎಲ್ಎಲ್ಬಿ ಸೀಟ್: ಸೆಲ್ಫಿ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ ಮೃತ ಗೋಪಾಲ್ ಪಿಯುಸಿ ಹಾಗೂ ಐಟಿಐ ಮುಗಿಸಿದ್ದ ಮತ್ತು ವಕೀಲನಾಗುವ ಕನಸು ಕಟ್ಟಿಕೊಂಡಿದ್ದ. ಆದರೆ, ಶೇಕಡಾವಾರು ಅಂಕ ಕಡಿಮೆ ಇದ್ದುದರಿಂದ ಎಲ್ಎಲ್ಬಿ ಸೀಟ್ ಸಿಕ್ಕಿರಲಿಲ್ಲ. ಹೀಗಾಗಿಯೇ ಈತ ಸಾವಿಗೆ ಶರಣಾಗಿದ್ದಾನೆ ಎಂದು ಹೇಳಲಾಗ್ತಿದೆ.
ಆತ್ಮಹತ್ಯೆಗೂ ಮುನ್ನ ಮೊಬೈಲ್ನಲ್ಲಿ ಸೆಲ್ಫಿ ವಿಡಿಯೋ ಹೇಳಿಕೆ ದಾಖಲಿಸಿರುವ ಗೋಪಾಲ್, ತನ್ನ ಜೀವನದಲ್ಲಿ ಉಂಟಾದ ಬೇಸರದ ಬಗ್ಗೆ ಹೇಳಿಕೊಂಡಿದ್ದಾನೆ. 'ನನ್ನ ಈ ಪರಿಸ್ಥಿತಿಗೆ ನಾನೇ ಕಾರಣ. ಇದಕ್ಕಾಗಿ ಯಾರೂ ಕಣ್ಣೀರು ಹಾಕುವ ಅವಶ್ಯಕತೆಯೂ ಇಲ್ಲ. ಅಲ್ಲದೇ, ಯಾರನ್ನೂ ದೂಷಿಸಬೇಡಿ. ಜೊತೆಗೆ ನಾನು ಪತ್ರವೊಂದನ್ನು ಕೂಡ ಬರೆದಿದ್ದೆ. ಆದರೆ, ಅದು ಸಿಗುತ್ತದೋ, ಇಲ್ಲವೋ ಗೊತ್ತಿಲ್ಲ. ಹೀಗಾಗಿಯೇ ವಿಡಿಯೋ ಚಿತ್ರೀಕರಣ ಮಾಡಿದ್ದೇನೆ' ಎಂದು ಹೇಳಿದ್ದಾನೆ. ಈ ವಿಡಿಯೋವನ್ನು ತನ್ನ ಅಣ್ಣ ಹಾಗೂ ತನ್ನ ಸ್ನೇಹಿತರಿಗೆ ಕಳಿಸಿದ್ದಾನೆ ಎನ್ನಲಾಗ್ತಿದೆ. ಸದ್ಯ ಈ ಬಗ್ಗೆ ಕುದೂರು ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಕೋಲಾರ: ಬೃಹತ್ ಮರದ ಕೊಂಬೆ ಬಿದ್ದು ಇಬ್ಬರು ಸಾವು