ಕರ್ನಾಟಕ

karnataka

ETV Bharat / state

ರಾಜ್ಯದಲ್ಲೂ ತಲೆ ಎತ್ತಲಿದೆ ತಿಮ್ಮಪ್ಪನ ಬೃಹತ್​ ದೇವಸ್ಥಾನ - CM HDK

ರೇಷ್ಮೆನಗರಿ ರಾಮನಗರದಲ್ಲಿ ತಿರುಮಲದಲ್ಲಿರುವ ವೆಂಕಟರಮಣಸ್ವಾಮಿ ದೇವಸ್ಥಾನ ಹೋಲುವಂತಹ ದೇವಾಲಯವೊಂದು ತಲೆ ಎತ್ತಲಿದೆ. ಅದಕ್ಕಾಗಿ ಸ್ಥಳ ಹುಡುಕುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಸಂಗ್ರಹ ಚಿತ್ರ

By

Published : Jun 11, 2019, 11:20 PM IST

ರಾಮನಗರ: ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ದೇವಸ್ಥಾನದಂತೆಯೇ ರಾಜ್ಯದಲ್ಲೂ ಬೃಹತ್​ ತಿಮ್ಮಪ್ಪನ ದೇಗುಲವೊಂದು ನಿರ್ಮಾಣವಾಗಲಿದೆ. 15 ಎಕರೆ ಜಾಗದಲ್ಲಿ ತಲೆ ಎತ್ತಲಿರುವ ತಿಮ್ಮಪ್ಪನ ದೇವಾಲಯಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್​ ನೀಡಿದ್ದು, ದೇವಾಲಯ ನಿರ್ಮಾಣಕ್ಕೆ ಸ್ಥಳ ಹುಡುಕುವಂತೆ ಸೂಚಿಸಿದೆ.

ಈ ತಿರುಪತಿ ದೇವಾಲಯವು ರೇಷ್ಮೆ ನಗರಿ ರಾಮನಗರದಲ್ಲಿ ತಲೆ ಎತ್ತಲಿದೆ ಎನ್ನಲಾಗುತ್ತಿದ್ದು, ಅದಕ್ಕಾಗಿ‌ ಅಧಿಕಾರಿಗಳು ಸ್ಥಳಕ್ಕಾಗಿ ಶೋಧ ಆರಂಭಿಸಿದ್ದಾರೆ. ತಿರುಪತಿ ತಿಮ್ಮಪ್ಪನ ದೇವಾಲಯದ ಮಾದರಿಯಲ್ಲೇ ಇಲ್ಲೂ ನಿರ್ಮಾಣ ಮಾಡಲಾಗುತ್ತಿದ್ದು, ಅದಕ್ಕಾಗಿ 15 ಎಕರೆ ಭೂಮಿ‌ ಮಂಜೂರಾಗಿದೆ. ದೇವಾಲಯದ ನಿರ್ಮಾಣ ಕಾರ್ಯವನ್ನು ಸಿಎಂ ಕುಮಾರಸ್ವಾಮಿ ಟಿಟಿಡಿ (ತಿರುಪತಿ ತಿರುಮಲ ದೇವಸ್ಥಾನಂ) ಗೆ ನೀಡಿದ್ದಾರೆ.

ಸಿಎಂ ಕುಮಾರಸ್ವಾಮಿ, ಮುಜರಾಯಿ ಇಲಾಖೆ ಸಚಿವ ಪಿ.ಟಿ. ಪರಮೇಶ್ವರ್‌ ನಾಯ್ಕ ಹಾಗೂ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಕೊಂಡಿದ್ದಾರೆ. ದೇವಾಲಯ ನಿರ್ಮಾಣಕ್ಕೆ ಬೇಕಾದ ಸ್ಥಳವನ್ನು ಗುರುತಿಸುವಂತೆ ಸಿಎಂ ಕುಮಾರಸ್ವಾಮಿ ಜಿಲ್ಲಾಡಳಿತಕ್ಕೆ ಸೂಚನೆ ಕೂಡ ನೀಡಿದ್ದಾರೆ.

ರೇಷ್ಮೆನಗರಿ ರಾಮನಗರದಲ್ಲಿ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕಾಗಿ ಸ್ಥಳ ಶೋಧ

ತಿಮ್ಮಪ್ಪನ ದೇಗುಲ ನಿರ್ಮಾಣದ ಜೊತೆಗೆ ರಾಜ್ಯದ ಆರು ದೇವಸ್ಥಾನಗಳ ಜೀರ್ಣೋದ್ಧಾರಕ್ಕೂ ಕೂಡ ಸರ್ಕಾರ ಸಮ್ಮತಿಸಿದೆ. ಅಲ್ಲದೆ ರಾಮನಗರದಲ್ಲಿ ತಿಮ್ಮಪ್ಪನ ದೇವಾಲಯ ನಿರ್ಮಾಣವಾಗುವ ಸೂಚನೆ ಸಿಕ್ಕಿರುವುದು ರೇಷ್ಮೆ ನಗರಿ ಜನರ ಸಂತಸಕ್ಕೆ ಕಾರಣವಾಗಿದೆ.

ಟಿಟಿಡಿಯದ್ದೇ ಜವಾಬ್ದಾರಿ:

ತಿರುಪತಿ ದೇವಾಲಯದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಟಿಟಿಡಿ ಸಮಿತಿ ರಾಜ್ಯ ಸರ್ಕಾರಕ್ಕೆ ಈ ಹಿಂದೆಯೇ 20ಎಕರೆ ಜಮೀನು ಮಂಜೂರಾತಿಗೆ ಮನವಿ ಸಲ್ಲಿಸಿತ್ತು. ಅಲ್ಲದೇ ಖುದ್ದು ಟಿಟಿಡಿಯ ಸಮಿತಿ ಕೂಡ ರಾಮನಗರಕ್ಕೆ ಭೇಟಿ ನೀಡಿತ್ತು. ರಾಮನಗರ ಹೊರವಲಯದ ವಡೇರಹಳ್ಳಿ ಸಮೀಪ ರಾಮದೇವರ ಬೆಟ್ಟದ ಅಂಚಿಗೆ ಅಂಟಿಕೊಂಡಂತಿರುವ ರೈತರ ಜಮೀನು ಖರೀದಿಗೂ ಸಹ ಮುಂದಾಗಿತ್ತು. ಇನ್ನು ಕಳೆದ ವಾರ ಕೂಟಗಲ್ ಸಮೀಪದ ಚೌಡೇಶ್ವರಿಹಳ್ಳಿ, ಯರೇಹಳ್ಳಿ ಸಮೀಪದ ರಂಗಯ್ಯನದೊಡ್ಡಿ ಗ್ರಾಮ ಹಾಗೂ ಬಿಡದಿ ಬಳಿ ದೇವಾಲಯ ನಿರ್ಮಾಣದ ಜಾಗ ಪರಿಶೀಲನೆಗೆ ಸಮಿತಿ ಭೇಟಿ ನೀಡಿತ್ತು.

ತಿಮ್ಮಪ್ಪನ ದೇವಾಲಯದ ನಿರ್ಮಾಣ ಕಾರ್ಯವನ್ನ ಟಿಟಿಡಿಯೇ ಸಂಪೂರ್ಣವಾಗಿ ವಹಿಸಿಕೊಂಡಿದ್ದು, ತಿರುಪತಿ ದೇವಾಲಯಕ್ಕೆ ರಾಜ್ಯದಿಂದ ಪ್ರತಿವರ್ಷ ತೆರಳುತ್ತಿದ್ದ ಲಕ್ಷಾಂತರ ಭಕ್ತರು ಇದೀಗ ರಾಮನಗರದಲ್ಲಿ ತಿಮ್ಮಪ್ಪನ ದೇವಾಲಯ ಆಗುವುದರಿಂದ ಭಕ್ತರ ಬಳಿಯೇ ಭಗವಂತ ಬಂದಂತಾಗುತ್ತದೆ. ಜೊತೆಗೆ ರಾಮನಗರ ಜಿಲ್ಲೆ ಪ್ರವಾಸೋದ್ಯಮ ಸ್ಥಳವಾಗಿ ಸಾಕಷ್ಟು ಅಭಿವೃದ್ಧಿ ಹೊಂದಲಿದೆ ಅನ್ನೋದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ABOUT THE AUTHOR

...view details