ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿರುವ ನೂತನ ಹಾಲು ಸಂಸ್ಕರಣಾ ಮತ್ತು ಹಾಲಿನ ಪುಡಿ ಘಟಕಕ್ಕೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಹೈನುಗಾರಿಕೆ ಉತ್ಪನ್ನಗಳನ್ನು ಹೆಚ್ಚಾಗಿ ಉತ್ಪಾದಿಸುವುದರಿಂದ ರೈತರಿಗೆ ಅಧಿಕ ಆದಾಯ ಸಿಗುತ್ತದೆ. ಹಾಲಿನ ಜೊತೆಗೆ ಅದರ ಉಪ ಉತ್ಪನ್ನಗಳು ಹಾಲು ಉತ್ಪಾದಕರಿಗೆ ಅಧಿಕ ವರಮಾನ ತಂದು ಕೊಡುವಲ್ಲಿ ನೆರವಾಗಲಿದೆ. ಇದು ರೈತರ ವೈಯಕ್ತಿಕ ಏಳಿಗೆಗೂ ಸಹಾಯಕ ಎಂದು ಅಭಿಪ್ರಾಯಪಟ್ಟರು.
ನಂ.1 ಘಟಕ:ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕನ್ನಮಂಗಲದಲ್ಲಿ ಒಟ್ಟು 125 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹಾಲು ಸಂಸ್ಕರಣಾ ಮತ್ತು ಹಾಲಿನ ಪುಡಿ ಉತ್ಪಾದಿಸುವ ಘಟಕ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಇಡೀ ದೇಶದಲ್ಲೇ ಅತ್ಯುತ್ತಮ ಮತ್ತು ನಂಬರ್ 1 ಹಾಲಿನ ಪುಡಿ ಘಟಕ ಎನಿಸಿಕೊಂಡಿದೆ ಎಂದರು.
ದೇಶದಲ್ಲಿ ಕರ್ನಾಟಕ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲೇ ಅಧಿಕ ಪ್ರಮಾಣದಲ್ಲಿ ಹಾಲಿನ ಪುಡಿಯನ್ನು ಇಲ್ಲಿ ಉತ್ಪಾದಿಸಲಾಗುತ್ತಿದೆ. ಈ ಘಟಕದಲ್ಲಿ ಉತ್ಪಾದನೆಯಾಗುವ ಹಾಲಿನ ಪುಡಿಗೆ ಪ್ರೀಮಿಯಂ ಬೆಲೆ ಇದೆ ಎಂದು ಸೋಮಶೇಖರ್ ಮಾಹಿತಿ ನೀಡಿದರು.
ಕೋವಿಡ್ ಸಂದರ್ಭದಲ್ಲಿ ರಾಜ್ಯದ 8.5 ಲಕ್ಷ ಹೈನುಗಾರರಿಂದ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಸುಮಾರು 79 ಕೋಟಿ ರೂ. ವೆಚ್ಚದಲ್ಲಿ ಹಾಲನ್ನು ಖರೀದಿಸಿದೆ. ಹೀಗೆ ಖರೀದಿಸಿರುವ ಹಾಲನ್ನು ರಾಜ್ಯದಲ್ಲಿ ನಗರಸಭೆ ಮತ್ತು ಪುರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉಚಿತವಾಗಿ ಹಂಚಲಾಗಿದೆ ಎಂದರು.
ಇನ್ನು ಹಾಲು ಉತ್ಪಾದಕರಿಗೆ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ 5 ರೂ.ಗಳ ಪ್ರೋತ್ಸಾಹಧನವನ್ನು ಕಡಿತ ಮಾಡುವ ಚಿಂತನೆ ಇಲ್ಲ. ಯಾವುದೇ ಕಾರಣಕ್ಕೂ ರೈತರಿಗೆ ನೀಡುವ ಸಹಾಯಧನದಲ್ಲಿ ಕಡಿತ ಮಾಡಲಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಇತರೆ ಹಾಲು ಒಕ್ಕೂಟಗಳಲ್ಲಿ ಸಂಗ್ರಹವಾಗುವ ಅಧಿಕ ಹಾಲನ್ನು ಇಲ್ಲಿಗೆ ಕಳುಹಿಸಿಕೊಟ್ಟಲ್ಲಿ ನಿಗದಿತ ದರದಂತೆ ಹಾಲಿನ ಪುಡಿಯನ್ನಾಗಿ ಪರಿವರ್ತಿಸಿ ಕೊಡಲಾಗುವುದು ಎಂದು ಸಹಕಾರ ಸಚಿವರು ತಿಳಿಸಿದರು.