ಚನ್ನಪಟ್ಟಣ/ರಾಮನಗರ:ರಾಜ್ಯ ಚುನಾವಣಾ ಕಣ ರಂಗೇರಿದೆ. ಚುನಾವಣೆಗೆ ಇನ್ನೇನು ಕೆಲವೇ ದಿನಗಳ ಬಾಕಿ ಇದೆ. ಈ ಬಾರಿ ವರುಣಾ ಮತ್ತು ಕನಕಪುರ ಕ್ಷೇತ್ರಗಳ ಬಳಿಕ ಚುನಾವಣಾ ಅಖಾಡದಲ್ಲಿ ಸದ್ದು ಮಾಡುತ್ತಿರುವ ಮತ್ತೊಂದು ಕ್ಷೇತ್ರ ಚನ್ನಪಟ್ಟಣ ಕ್ಷೇತ್ರ. ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರಾನೇರ ಪೈಪೋಟಿ ನಡೆಯುತ್ತಿದೆ.
ಚನ್ನಪಟ್ಟಣ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ತವರು ಕ್ಷೇತ್ರ. ಚನ್ನಪಟ್ಟಣ ಕ್ಷೇತ್ರದಿಂದ ಜೆಡಿಎಸ್ ಹುರಿಯಾಳಾಗಿರುವ ಕುಮಾರಸ್ವಾಮಿ ಮತ್ತೊಮ್ಮೆ ಗೆದ್ದು ಮುಖ್ಯಮಂತ್ರಿ ಆಗುವ ಆಸೆಯಲ್ಲಿದ್ದಾರೆ. ಕ್ಷೇತ್ರದಿಂದ ಎರಡು ಬಾರಿ ಗೆದ್ದು ಮುಖ್ಯಮಂತ್ರಿಯಾಗಿದ್ದು, ಇದೀಗ ಮೂರನೇ ಬಾರಿಗೆ ಗೆದ್ದು ಸಿಎಂ ಆಗುವ ಗುರಿ ಹೊಂದಿದ್ದಾರೆ.
ಆದರೆ, ಈ ಬಾರಿ ಕುಮಾರಸ್ವಾಮಿಗೆ ಗೆಲುವು ಅಷ್ಟು ಸುಲಭದ ಮಾತಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಮಾತು. ಹೆಚ್.ಡಿ.ಕುಮಾರಸ್ವಾಮಿಗೆ ಸೆಡ್ಡು ಹೊಡೆಯಲು ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯರೂ ಆಗಿರುವ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಕಣದಲ್ಲಿದ್ದಾರೆ. ಬಿಜೆಪಿಯಿಂದ ಟಿಕೆಟ್ ಪಡೆದು ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿದಿರುವ ಸಿಪಿವೈ ಈ ಬಾರಿ ಶತಾಯಗತಾಯ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ.
2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತು 2013ರಲ್ಲಿ ಸಮಾಜವಾದಿ ಪಾರ್ಟಿಯಿಂದ ಸ್ಪರ್ಧಿಸಿದ್ದ ಸಿ.ಪಿ.ಯೋಗೇಶ್ವರ್ ಈ ಕ್ಷೇತ್ರದಿಂದ ಭರ್ಜರಿ ಜಯಗಳಿಸಿದ್ದರು. ಆದರೆ, 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಿಪಿವೈ ಕುಮಾರಸ್ವಾಮಿ ವಿರುದ್ಧ ಭಾರಿ ಪೈಪೋಟಿ ನಡೆಸಿ ಸೋಲು ಕಂಡಿದ್ದರು. ಈ ಬಾರಿಯೂ ಇಬ್ಬರ ಮಧ್ಯೆ ಪೈಪೋಟಿ ಮುಂದುವರೆದಿದೆ.ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದ ಕಾವು ಜೋರಾಗಿದ್ದು, ಮಗ ಕುಮಾರಸ್ವಾಮಿ ಪರ ಮಾಜಿ ಪ್ರಧಾನಿ ದೇವೇಗೌಡ ಅವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಪ್ರಚಾರಕ್ಕೂ ಮುನ್ನವೇ ಮತಬೇಟೆಗೆ ಜೆಡಿಎಸ್ ಮುಂದಾಗಿದೆ.