ರಾಮನಗರ:ಸರ್ಕಾರ ಹಾಗೂ ಸಚಿವರು ಎಲ್ಲೆಲ್ಲಿ ದುಡ್ಡು ಸಿಗುತ್ತೆ ಅಂತ ನೋಡಿಕೊಂಡು ಕಾಲ ಕಳೆಯುತ್ತಿದ್ದಾರೆ. ರಾಜಕಾರಣ ಮಾಡೋದು ಹಾಗೂ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಾ ಜನರನ್ನು ದಾರಿ ತಪ್ಪಿಸುವ ಕಾರ್ಯದಲ್ಲೇ ದಿನಕಳೆಯುತ್ತಿರುವುದನ್ನ ಕಳೆದ ಐದು ತಿಂಗಳಿಂದ ನೋಡಿಕೊಂಡು ಬಂದಿದ್ದೇವೆ ಎಂದು ಸಂಸದ ಡಿ.ಕೆ ಸುರೇಶ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ರಾಜೀವ್ ಗಾಂಧಿ ಅವರ ಜನ್ಮದಿನಾಚರಣೆ ಹಾಗೂ ದೇವರಾಜು ಅರಸು ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸರ್ಕಾರ ಎಲ್ಲಾ ಕ್ಷೇತ್ರದಲ್ಲೂ ಸಂಪೂರ್ಣ ವಿಫಲವಾಗಿದೆ. ಪ್ರವಾಹ, ಕೊರೊನಾ ಏನೇ ಬಂದರೂ ಜನ ಸಾಯಬೇಕೆ ಹೊರತು ಸರ್ಕಾರ ಕಾಯುವ ಕೆಲಸ ಮಾಡುತ್ತಿಲ್ಲ ಬದಲಿಗೆ ಮೂರು ನಾಮ ಹಾಕ್ತಿದೆ ಹೊರತು ಬೇರೇನೂ ಇಲ್ಲಾ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರ ಲೋಕಸಭಾ ಅಧಿವೇಶನ ಕರೆಯಲಿ ಅಂತಾ ಎಲ್ಲಾ ವಿರೋಧ ಪಕ್ಷಗಳು ಕಾಯುತ್ತಿವೆ .ಸರ್ಕಾರದ ವೈಫಲ್ಯಗಳನ್ನ ಜನರ ಮುಂದೆ ತರುತ್ತೇವೆ. ಜನತೆ ಕೂಡ ಭ್ರಮೆಯಲ್ಲಿದ್ದಾರೆ, ಅಲ್ಲದೆ ಭಾವನಾತ್ಮಕವಾಗಿ ಅವರು ಜನರನ್ನ ಸೆಳೆದಿದ್ದಾರೆ. ನಮ್ಮ ರಾಷ್ಟ್ರೀಯ ನಾಯಕರೂ ಕೂಡ ಮಾಧ್ಯಮಗಳ ಮೂಲಕ ಜನರಿಗೆ ಸತ್ಯ ಹೇಳುತ್ತಿದ್ದಾರೆ. ಆದರೆ ಜನರನ್ನ ಭಾವನಾತ್ಮಕವಾಗಿ ಬಿಜೆಪಿಗರು ನಂಬಿಸುತ್ತಿದ್ದಾರೆ ಎಂದ ಅವರು ಇನ್ನು ಹತ್ತು ವರ್ಷ ಅವರಿಗೆ ಅಧಿಕಾರ ಕೊಟ್ಟರೆ ಕೇವಲ ವಿಮಾನ ಅಷ್ಟೇ ಅಲ್ಲಾ ಜಿಲ್ಲಾಧಿಕಾರಿ ಕಚೇರಿ, ಅಷ್ಟೇ ಏಕೆ ವಿಧಾನಸೌಧವನ್ನೂ ಖಾಸಗೀಕರಣ ಮಾಡಿಬಿಡುತ್ತಾರೆ ಎಂದು ವ್ಯಂಗ್ಯವಾಡಿದರು.