ರಾಮನಗರ :ಕಳೆದ ವಾರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸಂಪುಟಕ್ಕೆ ಸೇರ್ಪಡೆಯಾದ ನಂತರ ಇದೇ ಮೊದಲ ಬಾರಿಗೆ ತವರು ಜಿಲ್ಲೆ ರಾಮನಗರಕ್ಕೆ ಆಗಮಿಸಿದ ನೂತನ ಸಚಿವ ಸಿ ಪಿ ಯೋಗೇಶ್ವರ್ ಅವರಿಗೆ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು.
ಸಚಿವರಾಗಿ ಮೊದಲ ಬಾರಿಗೆ ತವರು ಜಿಲ್ಲೆಗೆ ಬಂದ ಸಿ ಪಿ ಯೋಗೇಶ್ವರ್ ಪ್ರತಿಕ್ರಿಯೆ.. ಕೆಂಗಲ್ ಆಂಜನೇಯ ದೇವಸ್ಥಾನದಿಂದ ಚನ್ನಪಟ್ಟಣ ಬಸ್ ನಿಲ್ದಾಣದವರೆಗೂ ಸುಮಾರು 7 ಕಿ.ಮೀ. ಮೋಟಾರ್ ಬೈಕ್ ರ್ಯಾಲಿ ನಡೆಸಿ ಸಚಿವರನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಲಾಯಿತು. ದಾರಿ ಉದ್ದಕ್ಕೂ ಹೂವಿನ ಮಳೆಗರೆದು ಪಟಾಕಿ ಸಿಡಿಸಿ ತಮ್ಮ ನೆಚ್ಚಿನ ನಾಯಕನನ್ನ ಬರಮಾಡಿಕೊಂಡರು. ಅಲ್ಲದೇ ಜೆಸಿಬಿ ಮೂಲಕ ಬೃಹತ್ ಗಾತ್ರದ ಸೇಬಿನ ಹಾರ ಹಾಕಿ ಸಂಭ್ರಮಿಸಿದರು.
ಕೆಂಗಲ್ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಿ. ಪಿ. ಯೋಗೇಶ್ವರ್, ರಾಮನಗರ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಅದ್ದೂರಿ ಸ್ವಾಗತ ನೀಡುವ ಮೂಲಕ ನನ್ನ ಮೇಲಿನ ಜವಾಬ್ದಾರಿ ಹೆಚ್ಚಿಸಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಯೋಜನೆಗಳನ್ನು ಪೂರೈಸುವ ಬಗ್ಗೆ ಆದ್ಯತೆ ನೀಡುವುದಾಗಿ ಹೇಳಿದರು.
ಓದಿ:ಚನ್ನಪಟ್ಟಣಕ್ಕೆ ಸಿಪಿವೈ ಆಗಮನ: ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ
ಇಂದು ಅಥವಾ ನಾಳೆಯೊಳಗೆ ಖಾತೆಗಳು ಹಂಚಿಕೆಯಾಗಬಹುದು. ತಮಗೆ ಯಾವುದೇ ಖಾತೆ ಕೊಟ್ಟರು ಸಮರ್ಥವಾಗಿ ನಿಭಾಯಿಸುತ್ತೇನೆ. ಮುಂದಿನ ದಿನಗಳಲ್ಲಿ ರಾಮನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಹಾಗೂ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವರವಾಗಿ ತಿಳಿಸುವುದಾಗಿ ಹೇಳಿದರು.