ರಾಮನಗರ : ಕಾಶ್ಮೀರಕ್ಕೆ ಒಳ್ಳೆಯದಾಗುವುದಿದ್ದರೆ ಈ ಮಸೂದೆಗೆ ಯಾವುದೇ ತೊಂದರೆಯಿಲ್ಲ. ಈ ಮಸೂದೆಯಿಂದ ಕಾಶ್ಮೀರದಲ್ಲಿ ಶಾಂತಿ ನೆಲೆಸಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆರ್ಟಿಕಲ್ 370 ರದ್ದತಿ ಕುರಿತಾಗಿ ಪ್ರತಿಕ್ರಿಯಿಸಿದರು.
ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ, ನಾನು ರಾಜಕೀಯಕ್ಕೆ ಬಂದಿದ್ದೇ ಆಕಸ್ಮಿಕ. ಬಡವರ ಪರ ಕೆಲಸ ಮಾಡಿದ್ದೇನೆ. ಲೇಔಟ್ ಮಾಡಿ ಹಲವಾರು ಬಡವರ ತಲೆ ಒಡೆದು ನಾನು ರಾಜಕೀಯ ನಡೆಸಿಲ್ಲ ಎಂದು ಮಾಜಿ ಸಚಿವ ಯೋಗೇಶ್ವರ್ ವಿರುದ್ದ ವಾಗ್ದಾಳಿ ನಡೆಸಿದರು.
ಕ್ಷೇತ್ರದ ಶಾಸಕನಾಗಿ, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಲು 2ನೇ ಬಾರಿ ದೇವರ ಆಶೀರ್ವಾದ ಸಿಕ್ಕಿತ್ತು. ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ನೀಡಿ ಕ್ಷೇತ್ರದತ್ತ ಮುಖ ಮಾಡಿರಲಿಲ್ಲ. ಈಗ ಬಿಡುವು ಸಿಕ್ಕಿದೆ. ಸದ್ಯದಲ್ಲೇ ಚನ್ನಪಟ್ಟಣದ ಪ್ರತಿಹಳ್ಳಿಗೂ ಭೇಟಿ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.
ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡ್ತೇನೆ. ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಟೀಕೆ, ಹೊಗಳಿಕೆ ಎರಡನ್ನೂ ಕಂಡಿದ್ದೇನೆ. ಕೆಆರ್ಎಸ್ನಲ್ಲಿ ಇದೀಗ 7.5 ಟಿಎಂಸಿ ನೀರಿದೆ. ಇಗ್ಗಲೂರಿನ ಜಲಾಶಯಕ್ಕೆ ಸತ್ತೆಗಾಲದಿಂದ ನೀರು ಹರಿಸುವ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಆದರೆ, ಆ ಯೋಜನೆಗೂ ಕೊಕ್ಕೆ ಹಾಕಲು ಈಗಿನ ಸರ್ಕಾರ ಹೊರಟಿದೆ. ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಗುಡುಗಿದರು.