ರಾಮನಗರ:ಪಾದಯಾತ್ರೆ ಮಾಡಬಾರದು ಎಂದು ನೋಟಿಸ್ ನೀಡಿದ್ದು ನಿಜ. ಅದು ಕಾನೂನು ಬದ್ಧ ನೋಟಿಸ್ ಅಲ್ಲ. ಸೆಕ್ಷನ್ 144 ಅನ್ನು ಯಾವ ರೀತಿ ಜಾರಿಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ರಾಮನಗರದ ತಮ್ಮ ದೊಡ್ಡ ಆಲಹಳ್ಳಿ ನಿವಾಸದಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡಿದರು.
ನಮ್ಮ ಪಾದಯಾತ್ರೆ ನಿಲ್ಲಿಸಲು ಈ ರೀತಿ ನಿಯಮ ಮಾಡಿದ್ದಾರೆ. ಈ ಪಾದಯಾತ್ರೆಗೆ ಯಾರೆಲ್ಲಾ ಬಂದಿದ್ದಾರೋ ಅವರ ವೋಟರ್ ಐಡಿ ನೀಡುತ್ತೇನೆ. ವಿಡಿಯೋ ಕಳುಹಿಸಿಕೊಡುತ್ತೇನೆ. ಕೇವಲ ರಾಮನಗರ ಮಾತ್ರವಲ್ಲ, ಬೆಂಗಳೂರಿನಲ್ಲಿ ಬಿಜೆಪಿ ನಾಯಕರು ಓಡಾಡಿರುವ ವಿಡಿಯೋ ಕೂಡ ಕೊಡುತ್ತೇನೆ. ಅವರ ಮೇಲೂ ಪ್ರಕರಣ ದಾಖಲಿಸಲಿ. ಸಿದ್ದರಾಮಯ್ಯ ವಿಶ್ರಾಂತಿ ಪಡೆಯುತ್ತಿದ್ದು, ಇಂದು ಸಂಜೆ ಬರುವುದಾಗಿ ತಿಳಿಸಿದ್ದಾರೆ. ನಾನೇ ಅವರಿಗೆ ವಿಶ್ರಾಂತಿ ಪಡೆದು ನಾಳೆ ಬರುವಂತೆ ಹೇಳಿದೆ ಎಂದರು.
ಕಾಲು ಜಾರಿದ ಬಗ್ಗೆ ಬಿಜೆಪಿಗರ ಲೇವಡಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ನಾನು ಕೂತರು, ನಿಂತರು, ಮಲಗಿದರೂ ಬಿಜೆಪಿಯವರಿಗೆ ಖುಷಿ. ನನ್ನ ಬಗ್ಗೆ ಮಾತನಾಡದಿದ್ದರೆ ಅಶ್ವತ್ಥ್ ನಾರಾಯಣ್ ಅವರು ಹೇಳಿರುವಂತೆ ಶಕ್ತಿ ಬರುವುದಿಲ್ಲವಂತೆ. ಹೀಗಾಗಿ ಅವರು ನನ್ನ ವಿಚಾರದ ಬಗ್ಗೆ ಮಾತನಾಡುತ್ತಾರೆ ಎಂದರು.
ಉಳಿದ 9 ದಿನಗಳ ಪಾದಯಾತ್ರೆಗೆ ಸರ್ಕಾರ ಅವಕಾಶ ನೀಡುತ್ತಾ? ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಅವರು ಏನಾದರೂ ಮಾಡಲಿ, ನಮ್ಮ ನಿರ್ಧಾರ ಅಚಲ. ನಿನ್ನೆ ಬಸ್ ವ್ಯವಸ್ಥೆ ಇಲ್ಲದಿದ್ದರೂ ಜನ ಬಂದಿದ್ದಾರೆ.
ಎರಡನೇ ದಿನದ ಪಾದಯಾತ್ರೆಯ ಉತ್ಸಾಹ ಹೇಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ನಿನ್ನೆ ಕರ್ಫ್ಯೂನಿಂದ ವಾಹನಗಳಿಗೆ ಅವಕಾಶ ಇರಲಿಲ್ಲ. ಆದರೂ ಹಲವು ಕಡೆಗಳಿಂದ ಹುಡುಗರು ಹೇಗೆ ಬಂದರೋ ಗೊತ್ತಿಲ್ಲ. ನಿನ್ನೆ ಕಾಡಿನ ಮಧ್ಯೆ ಒಂದೇ ಮಾರ್ಗ ಇತ್ತು. ಇಂದು ಎರಡು ಮೂರು ಮಾರ್ಗಗಳಿದ್ದು, ಈಗ ಇಲ್ಲಿಂದ ಪಾದಯಾತ್ರೆ ಆರಂಭವಾಗಲಿದೆ. ಪ್ರತಿಯೊಬ್ಬರನ್ನೂ ಸ್ವಾಗತ ಮಾಡಿದ್ದೇವೆ ಎಂದು ತಿಳಿಸಿದರು.
ಕೋವಿಡ್ ಹೆಚ್ಚಳದ ಬಗ್ಗೆ ಮಾತನಾಡುತ್ತಾ, ಮುಖ್ಯಮಂತ್ರಿಗಳಿಗೆ ಗೊತ್ತಿದೆಯೋ ಇಲ್ಲವೋ. ನಿನ್ನೆ ರಾತ್ರಿ ಅಧಿಕಾರಿಗಳು ಬಂದು ನನಗೆ ಕೋವಿಡ್ ಪರೀಕ್ಷೆ ಮಾಡಬೇಕು ಎಂದು ಕೇಳುತ್ತಾರೆ. ವಿಮಾನ ನಿಲ್ದಾಣದಲ್ಲಿ ಬಂದವರನ್ನೆಲ್ಲಾ ಪರೀಕ್ಷೆ ಮಾಡುತ್ತಿದ್ದಾರೆ. ಇಬ್ಬರಿಗೆ ಪರೀಕ್ಷೆ ಮಾಡಿದರೆ ಒಬ್ಬರಿಗೆ ಸೋಂಕು ಎಂದು ಹೇಳುತ್ತಿದ್ದಾರೆ. ಸಂಖ್ಯೆ ಹೆಚ್ಚಿಸಲು ಈ ರೀತಿ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರಿ ಅಧಿಕಾರಿಗಳೇ ಮಾಹಿತಿ ನೀಡುತ್ತಿದ್ದಾರೆ. ಇಲ್ಲಿ ನೂರಾರು ವೈದ್ಯರು ಇದ್ದಾರೆ. ನಮಗೆ ತೊಂದರೆ ಕೊಡುವ ಆಸೆ ನಿಮಗಿದ್ದರೆ ಕೊಡಿ. ಆದರೆ ಜನರಿಗೆ ಯಾಕೆ ತೊಂದರೆ ನೀಡುತ್ತೀರಿ? ಕೋವಿಡ್ ನಿಯಮ ಹಾಕಿ, ಆದರೆ ಕರ್ಫ್ಯೂ ತೆಗೆಯಿರಿ. ಜನರ ವ್ಯಾಪಾರ ಏನಾಗಬೇಕು? ಕೆಎಸ್ಆರ್ಟಿಸಿ ಪರಿಸ್ಥಿತಿ ಏನಾಗಬೇಕು? ನಿನ್ನೆ ರಾತ್ರಿ ಕರ್ಫ್ಯೂ ಎಲ್ಲಿತ್ತು? ಜನ ಓಡಾಡುತ್ತಿದ್ದರಲ್ಲ. ನಿಮ್ಮ ಪಕ್ಷದವರು ಕಾನೂನು ಉಲ್ಲಂಘಿಸಿದ್ದಾಗ ಯಾವ ಕ್ರಮ ಕೈಗೊಂಡಿದ್ದೀರಿ. ನಿಮ್ಮ ಶಾಸಕ ಮುಸಲ್ಮಾನರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದಾಗ ಯಾಕೆ ಸುಮ್ಮನಿದ್ದೀರಿ? ಕೇವಲ ನಮ್ಮ ಮೇಲೆ ಯಾಕೆ ಪ್ರಕರಣ ದಾಖಲಿಸುತ್ತೀರಿ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: 'ಹಾಡಿದ್ದೇ ಹಾಡೋ ಕಿಸಬಾಯಿದಾಸ ಅನ್ನೋಹಾಗೆ ಸಿದ್ದರಾಮಯ್ಯ ಹೇಳಿದ್ದೇ ಹೇಳ್ತಾರೆ'
ಪರೀಕ್ಷೆ ಮಾಡಿ ಪಾಸಿಟಿವ್ ನೀಡಲು ವೈದ್ಯಾಧಿಕಾರಿಗಳು ಬಂದಿದ್ದು ಯಾಕೆ? ಎಂಬ ಪ್ರಶ್ನೆಗೆ ಅವರು ಉತ್ತರಿಸಿ, ನನ್ನ ಪರೀಕ್ಷೆ ಮಾಡಬೇಕಂತೆ, ಪರೀಕ್ಷೆ ಮಾಡಿ ಪಾಸಿಟಿವ್ ಇದೆ ಅಂತಾ ಹೇಳಲು ಬಂದಿದ್ದಾರೆ. ಡಿಸಿ, ಸಿಇಒಗೆ ಕೋವಿಡ್ ಸೋಂಕು ಎದುರಾಗಿದ್ದು, ಅವರ ಪಕ್ಕದಲ್ಲಿದ್ದ ಸಿಎಂಗೂ ಏನಾದರೂ ಕೋವಿಡ್ ಬಂದಿದೆಯೇ? ನನಗೆ ಸೋಂಕಿನ ಲಕ್ಷಣಗಳಿವೆಯೇ? ನಾನು ಫಿಟ್ ಆಗಿದ್ದು, 15 ದಿನ ನಡೆಯುತ್ತೇನೆ. ಬನ್ನಿ ನನ್ನ ಜತೆ, ನೋಡಿ ಎಂದರು.
ಪಾದಯಾತ್ರೆ ಬಗ್ಗೆ ಸಚಿವರ ಟೀಕೆ, ಕೋವಿಡ್ ಹೆಚ್ಚಳವಾದರೆ ಕಾಂಗ್ರೆಸ್ ಕಾರಣ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ, ನಮ್ಮ ಮೇಲೆ ಗೂಬೆ ಕೂರಿಸಲು ಅವರು ಕಾಯುತ್ತಿದ್ದಾರೆ. ಅವರು ಲಂಚ ಹೊಡೆದಿದ್ದನ್ನು ಯಾರೂ ಮರೆತಿಲ್ಲ. 10 ಸಾವಿರ ಬೆಡ್ ತಂದು, ಔಷಧಿ, ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಎಷ್ಟು ದುಡ್ಡು ಹೊಡೆದಿದ್ದಾರೆ. ಹೆಣದ ಮೇಲೆ ಹಣ ಮಾಡಿದರಲ್ಲಾ ಅದು ಲೆಕ್ಕಕ್ಕೆ ಇಲ್ಲವೇ? 4 ಲಕ್ಷ ಜನ ಸತ್ತಾಗ ಕೇವಲ 40 ಸಾವಿರ ಜನ ಸತ್ತಿದ್ದಾರೆ ಎಂದು ಹೇಳಿದರಲ್ಲಾ? ಸದನದಲ್ಲಿ ಗಲಾಟೆ ಮಾಡಿದಾಗ, ಕೆಲವರಿಗೆ 1 ಲಕ್ಷ ಕೊಡುವುದಾಗಿ ಹೇಳಿದ್ದಾರೆ. ಈ ಮೊದಲು ನಾವೇ ನಿಯಂತ್ರಣ ಮಾಡಿದ್ದೇವೆ ಎಂದರಲ್ಲಾ, ಮಾಡಲಿ. ಬೋಗಸ್ ನಂಬರ್ ಕೊಟ್ಟು ಜನರಿಗೆ ತೊಂದರೆ ಯಾಕೆ ಕೊಡುತ್ತಾರೆ? ರಾಜಕಾರಣ ಮಾಡಿ, ಆದರೆ ಜನರಿಗೆ ತೊಂದರೆ ಕೊಡುತ್ತಿರುವುದೇಕೆ? ತರಕಾರಿ ಮಾರಾಟವಾಗದೆ ಎಷ್ಟು ಜನ ಉಚಿತವಾಗಿ ಹಂಚಿದ್ದಾರೆ ಗೊತ್ತಿದೆಯೇ ಎಂದರು.
'ನಾನ್ಯಾಕೆ ಕ್ಷಮೆ ಕೇಳಲಿ'
ಕಾಂಗ್ರೆಸ್ ಕಿವಿ ಹಿಡಿದು ಕ್ಷಮೆ ಕೋರಬೇಕು ಎಂಬ ಗೃಹಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ನಾನ್ಯಾಕೆ ಕ್ಷಮೆ ಕೇಳಲಿ? ಅಜ್ಞಾನದ ಜ್ಞಾನೇಂದ್ರನ ಮಾತನ್ನು ಬಹಳ ಗೌರವದಿಂದ ಸ್ವೀಕಾರ ಮಾಡುತ್ತೇನೆ. ಅವರು ಮಂತ್ರಿಗಿರಿ ಆರಂಭಿಸಿದ್ದೆ, ನಾವು ಅವರನ್ನು ರೇಪ್ ಮಾಡುತ್ತಿದ್ದೇವೆ ಎಂದು ಹೇಳುವ ಮೂಲಕ ಎಂದು ಛೇಡಿಸಿದರು. ಯಾವ ಜಿಲ್ಲೆಗಳಿಂದ ಜನ ಬರಲಿದ್ದಾರೆ ಎಂಬ ಪ್ರಶ್ನೆಗೆ, ಕೇವಲ ಕಾವೇರಿ ಜಲಾನಯನ ಪ್ರದೇಶದವರಿಗೆ ಮಾತ್ರ ಒಂದೊಂದು ದಿನ ಎಂದು ನಿಗದಿ ಮಾಡಿದ್ದೇವೆ. ಎಲ್ಲ ಜಿಲ್ಲೆಯ ಜನ ಎಲ್ಲ ದಿನಗಳಲ್ಲೂ ಬರಬಹುದು ಎಂದು ಹೇಳಿದರು.