ರಾಮನಗರ: ಬೊಂಬೆನಗರಿ ಚನ್ನಪಟ್ಟಣಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಆಗಮಿಸಿ ಎರಡನೇ ಬಾರಿಗೆ ಹೆಚ್.ಡಿ. ಕುಮಾರಸ್ವಾಮಿ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ನಗರದ ಶೇರು ಸರ್ಕಲ್ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಕಳೆದೆರಡು ದಿನಗಳಲ್ಲಿ ಹದಿನಾರು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ದೇಶದಲ್ಲಿ ರೈತನಿಗೆ ಪಿಂಚಣಿ ಕೊಡ್ತೇನೆ ಎಂದು ಹೇಳುವ ವ್ಯಕ್ತಿ ಇದ್ರೆ ಅದು ಕುಮಾರಸ್ವಾಮಿ ಎಂದರು.
ಹಿಂದೂಸ್ಥಾನದಲ್ಲಿ ನುಡಿದಂತೆ ನಡೆಯುವ ರಾಜಕಾರಣಿ ಯಾರಾದ್ರು ಇದ್ರೆ ಅದು ಕುಮಾರಸ್ವಾಮಿ ಮಾತ್ರ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಕಾಂಗ್ರೆಸ್‌ನವರ ವ್ಯಂಗ್ಯದ ನಡುವೆ ಸಾಲಮನ್ನಾ ಮಾಡಿದ್ದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಎರಡನೇ ಸಾಲಿನಲ್ಲಿ ಕುಳಿತ ಸಿದ್ದರಾಮಯ್ಯ ವ್ಯಂಗ್ಯ ಮಾಡಿ ಹೊರಗೆ ಹೋಗ್ತಾರೆ. ಈ ದೇಶದಲ್ಲಿ ಕಾಂಗ್ರೆಸ್‌ನ ಎಲ್ಲಾ ಕಾರ್ಯಕ್ರಮಗಳಿಗೆ ಹಣ ಕೊಟ್ಟು ಸಾಲ ಮನ್ನಾ ಮಾಡಿದ್ರೆ ಅದು ಕುಮಾರಸ್ವಾಮಿಯಿಂದ ಮಾತ್ರ ಸಾಧ್ಯವಾಗಿದೆ ಎಂದು ಮಗನನ್ನು ಕೊಂಡಾಡಿದರು.
ಸಿದ್ದರಾಮಯ್ಯ ಐವತ್ತು ಸಾವಿರ ಸಾಲ ಮನ್ನಾ ಮಾಡಿದ್ದರೂ 3500 ಕೋಟಿ ಬಾಕಿ ಉಳಿದಿತ್ತು. ಅದರ ಜೊತೆಗೆ 26 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದು, ಇಡೀ ಹಿಂದೂಸ್ಥಾನದಲ್ಲಿ ಕುಮಾರಸ್ವಾಮಿಯಂತ ಮತ್ತೊಬ್ಬ ಸಿಎಂ ಇಲ್ಲ. ಕಾಂಗ್ರೆಸ್ ಬಿಜೆಪಿಯವ್ರು ನನ್ನ ಮುಂದೆ ನಿಂತು ಹೇಳಲಿ ಎಂದು ಸವಾಲು ಹಾಕಿದರು. ಇದಲ್ಲದೆ ಮಂಡ್ಯದಿಂದ ಸ್ಪರ್ಧೆಗೆ ಒತ್ತಡ ಬಂದ್ರೂ ಚನ್ನಪಟ್ಟಣ ನನ್ನ ಕರ್ಮ ಭೂಮಿ ಅಂತ ನಿರಾಕರಿಸಿದ್ರು. ಮುಸ್ಲಿಂ ಮೀಸಲಾತಿ ಕೊಟ್ಟಿದ್ದು ಯಾರು? ಮುಸ್ಲಿಂ ವಸತಿ ಶಾಲೆಗಳನ್ನು ಕೊಟ್ಟಿದ್ದೆ. ಆದರೆ, ಸಮಾಜ ಕಲ್ಯಾಣ ಇಲಾಖೆಗಳಿಗೆ ಸೇರಿಸಿ ಹಾಳು ಮಾಡಿದ್ದರು. 13 ಬಾರಿ ಬಜೆಟ್ ಮಂಡಿಸಿದ್ದೇನೆ ಎನ್ನುವವರು ಉತ್ಸಾಹ ತೋರಲಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಕಾಲೆಳೆದರು.
ಚನ್ನಪಟ್ಟಣದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ರೂ ಒಂದೇ ತಾಯಿ ಮಕ್ಕಳಂತೆ ಕೆಲಸ ಮಾಡಿ. ಸಮೀಕ್ಷಾ ವರದಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಕುಮಾರಸ್ವಾಮಿ ಸಿಎಂ ಆಗುವುದು ಶತಸಿದ್ಧವಾಗಿದೆ. ಮುಖ್ಯಮಂತ್ರಿ ಕೊಡುವ ಹೆಗ್ಗಳಿಕೆ ಚನ್ನಪಟ್ಟಣಕ್ಕೆ ಸಲ್ಲಬೇಕು. ಯುವಕರು ದೇಶದ ಮುಂದಿನ ಪ್ರಜೆಗಳು ಈ ಪಕ್ಷವನ್ನ ಉಳಿಸಿ, ನಾವು ತಾಯಿ ಭುವನೇಶ್ವರಿ ಮಕ್ಕಳು ನಾಡಿಗಾಗಿ ತಮ್ಮ ಶಕ್ತಿ ತೋರಿಸಿ. ಕುಮಾರಸ್ವಾಮಿ ಇಡೀ ರಾಜ್ಯ ಸುತ್ತಬೇಕು ಅವರು ಬರಲು ಸಾಧ್ಯವಿಲ್ಲ. ರಾತ್ರಿ 12 ರವರೆಗೂ ಪ್ರಚಾರ ಮಾಡುತ್ತಿದ್ದಾರೆ. ಯಾರು ಏನೇ ಹೇಳಿದರೂ ಅಪಪ್ರಚಾರ ಮಾಡಿದರೂ ನಿಮ್ಮ ಮನೆ ಮಗನನ್ನು ಸಿಎಂ ಮಾಡ್ತೀವಿ ಅಂತ ಪಣ ತೊಡಿ ಎಂದು ಪುತ್ರನ ಗೆಲುವಿಗೆ ಹೆಚ್ ಡಿಡಿ ಕರೆ ಕೊಟ್ಟರು.
ಎರಡನೇ ಬಾರಿಗೆ ಚನ್ನಪಟ್ಟಣ ಕ್ಷೇತ್ರಕ್ಕೆ ಹೆಚ್ಡಿಡಿ:ಚುನಾವಣೆ ಆರಂಭವಾದ ನಂತರ ಎರಡನೇ ಬಾರಿಗೆ ಚನ್ನಪಟ್ಟಣ ಕ್ಷೇತ್ರಕ್ಕೆ ಪ್ರಚಾರಕ್ಕೆ ಬಂದಿದ್ದೇನೆ. ಮೊನ್ನೆ ಕೂಡಾ ಬಹಿರಂಗ ಸಭೆ ಮಾಡಿದ್ದೆ. ಇವತ್ತೂ ಎರಡು ಕಡೆ ಸಭೆ ನಡೆಸಿ ಕುಮಾರಸ್ವಾಮಿ ಪರ ಪ್ರಚಾರ ಮಾಡ್ತಿದ್ದೇನೆ. ಇಬ್ರಾಹಿಂ ಕೂಡಾ ರಾಜ್ಯದ ಹಲವು ಭಾಗದಲ್ಲಿ ಪ್ರವಾಸ ಮಾಡ್ತಿದ್ದಾರೆ. ಇಡೀ ದೇಶದಲ್ಲಿ ಯಾವುದೇ ಸಿಎಂ ಕೂಡಾ ದೊಡ್ಡಮಟ್ಟದಲ್ಲಿ ರೈತರ ಸಾಲ ಮನ್ನಾ ಮಾಡಿಲ್ಲ. ಕುಮಾರಸ್ವಾಮಿ ಏಕಾಂಗಿಯಾಗಿ ನಿಂತು ರೈತರ ಸಾಲಮನ್ನಾ ಮಾಡಿದ್ದಾರೆ ಎಂದರು.