ಕರ್ನಾಟಕ

karnataka

ETV Bharat / state

ರಾಮನಗರ: ನಡೆದಾಡುವ ದೇವರೆಂದೇ ಹೆಸರುವಾಸಿಯಾಗಿದ್ದ ಪವಾಡ ಪ್ರಸಿದ್ಧ ಬಸವಪ್ಪ ಇನ್ನಿಲ್ಲ.. - ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಪುಣ್ಯಕ್ಷೇತ್ರದ ಪವಾಡ ಪ್ರಸಿದ್ಧ ಬಸವಪ್ಪ ನಿಧನ

ಊರಿನ ವ್ಯಾಜ್ಯಗಳನ್ನು ಪರಿಹರಿಸುವಲ್ಲಿ ಬಸವಪ್ಪ ಮೊದಲಿಗನಾಗಿದ್ದ. ನಡೆದಾಡುವ ದೇವರೆಂದೇ ಈ ವೃಷಭ ಹೆಸರುವಾಸಿಯಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಸವಪ್ಪ ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದೆ.

ಪವಾಡ ಪ್ರಸಿದ್ಧ ಬಸವಪ್ಪ ಇನ್ನಿಲ್ಲ
ಪವಾಡ ಪ್ರಸಿದ್ಧ ಬಸವಪ್ಪ ಇನ್ನಿಲ್ಲ

By

Published : Mar 6, 2022, 3:34 PM IST

Updated : Mar 6, 2022, 3:55 PM IST

ರಾಮನಗರ : ನಡೆದಾಡುವ ದೇವರು ಎಂದೇ ಹೆಸರುವಾಸಿಯಾಗಿದ್ದ ಬೊಂಬೆನಗರಿ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಪುಣ್ಯಕ್ಷೇತ್ರದ ಪವಾಡ ಪ್ರಸಿದ್ಧ ಬಸವಪ್ಪ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದೆ.

20ರ ವಯೋಮಾನದ ಈ ಪವಾಡ ಬಸವಪ್ಪ, ಕೆಲದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತಿತ್ತು. ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಪುಣ್ಯಕ್ಷೇತ್ರದಲ್ಲಿ ನೆಲೆಸಿದ್ದ ಬಸವಪ್ಪ, ಸುಮಾರು 20 ವರ್ಷಗಳಿಂದ ಭಕ್ತರ ಕೋರಿಕೆ, ಕಷ್ಟಗಳನ್ನು ನಿವಾರಣೆ ಮಾಡುತ್ತಿತ್ತು. ತನ್ನ ಪವಾಡಗಳಿಂದ ರಾಜ್ಯದೆಲ್ಲೆಡೆ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಸವಪ್ಪನ ಆಶೀರ್ವಾದ ಪಡೆಯಲು ರಾಜ್ಯದ ನಾನಾ ಭಾಗಗಳಿಂದ ಬರುತ್ತಿದ್ದರು.

ಪವಾಡ ಪ್ರಸಿದ್ಧ ಬಸವಪ್ಪ ಇನ್ನಿಲ್ಲ

ಊರಿನ ವ್ಯಾಜ್ಯಗಳನ್ನು ಪರಿಹರಿಸುವಲ್ಲಿ ಬಸವಪ್ಪ ಮೊದಲಿಗನಾಗಿದ್ದ. ನಡೆದಾಡುವ ದೇವರೆಂದೇ ಹೆಸರುವಾಸಿಯಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಸವಪ್ಪ ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದೆ. ಇಡೀ ವಿಶ್ವದಲ್ಲೇ ಅತೀ ಎತ್ತರದ ಚಾಮುಂಡೇಶ್ವರಿ ವಿಗ್ರಹ ಪ್ರತಿಷ್ಠಾಪಿಸಿರುವ ಸ್ಥಳ ಎಂದು ಗೌಡಗೆರೆ ಕ್ಷೇತ್ರ ಹೆಸರುವಾಸಿಯಾಗಿದೆ.

ಭಕ್ತರಿಗೆ ಬಸವಣ್ಣನೇ ಒಂದು ನ್ಯಾಯಾಲಯ :ಇಲ್ಲಿಗೆ ಆಗಮಿಸುವ ಭಕ್ತರಿಗೆ ಈ ಬಸವಣ್ಣ ಒಂದು ನ್ಯಾಯಾಲಯವಿದ್ದಂತೆ. ಯಾವುದಾದರೂ ಕೆಲಸವಾಗಬೇಕಾದರೆ ಇಲ್ಲಿನ ಬಸವನ ಅನುಮತಿ ಕೇಳುತ್ತಾರೆ. ಈ ಬಸವಣ್ಣ ಅಸ್ತು ಎಂದು ತಲೆಯಾಡಿಸಿದರೆ ಅದು ಎಂತಹಾ ಕಠಿಣ ಕೆಲಸವದರೂ ನಿವಾರಣೆ ಆಗುತ್ತದೆ ಎಂಬ ಅಚಲ ನಂಬಿಕೆ ಇಲ್ಲಿಗೆ ಆಗಮಿಸುವ ಭಕ್ತರಿಗೆ ಇತ್ತು. ಇದರ ಜೊತೆಗೆ ಇದು ಕುಡುಕರ ಕುಡಿತ ಬಿಡಿಸುವ ಮಾಸ್ಟರ್ ಕೂಡ, ಇಲ್ಲಿ ಈ ಬಸವಪ್ಪ ಇದುವರೆಗೂ ಸಾವಿರಾರು ಜನರ ಕುಡಿತ ಬಿಡಿಸಿ ಮನೆಮಂದಿಯ ನೆಮ್ಮದಿ ಕಾಪಾಡಿದೆ.

ಇದಲ್ಲದೇ ಯಾವುದೇ ಭೂಮಿ ವ್ಯಾಜ್ಯಯಿದ್ದರೂ ಇದೇ ಆ ಸ್ಥಳಕ್ಕೆ ಹೋಗಿ ಆ ಭೂಮಿ ಯಾರಿಗೆ ಸೇರಬೇಕು ಎಂಬ ತೀರ್ಮಾನ ಮಾಡುತ್ತಿತ್ತು. ಆದಲ್ಲದೇ ಹಲವು ದೇವಸ್ಥಾನಗಳ ಜಾಗ ಒತ್ತುವರಿ ಮಾಡಿಕೊಂಡಿರುವವರು ಅವರಾಗಿಯೇ ಆ ಜಾಗ ಬಿಡುವಂತೆ ಮಾಡಿದೆ. ಮಾಟಮಂತ್ರ ಇನ್ನಿತರ ಸಮಸ್ತೆಗಳ ಹೊತ್ತು ಬರುವ ಭಕ್ತರ ಎಲ್ಲ ಸಮಸ್ಯೆಯನ್ನ ತನ್ನ ಪವಾಡದಿಂದ ಮುಕ್ತಿ ಕೊಡಿಸಿತ್ತು.

ರಾಜ್ಯದ ಹಲವಾರು ಜನ ತಮ್ಮ ಮನೆಗಳ ಹಾಗೂ ಉದ್ಯಮಗಳ ಪೂಜೆಗಳಿಗೆ ಈ ಬಸವಣ್ನನನ್ನ ಕರೆದುಕೊಂಡು ಹೋಗುತ್ತಿದ್ದರು. ಹಾಗೇ ಹೋದ ಊರುಗಳಲ್ಲಿ ಕೆಲವರ ಮನೆಗೆ ತಾನೇ ನೇರವಾಗಿ ತೆರಳಿ ಆ ಮನೆಯ ಜನರಿಗೆ ಆಶೀರ್ವಾದ ಮಾಡಿ ಬರುತ್ತಿತ್ತು. ಇಂದು ಈ ಬಸವಣ್ಣ ಇನ್ನಿಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆ ಭಕ್ತರಲ್ಲಿ ದುಃಖ ಮಡುಗಟ್ಟಿದೆ.

ಪವಾಡ ಬಸವಣ್ಣ ಎಂದೇ ಹೆಸರುವಾಸಿ :ಈ ಬಸವಣ್ಣನ ಪವಾಡ ಒಂದೆರಡಲ್ಲಾ. ಒಮ್ಮೆ ಹೀಗೆ ಬೆಂಗಳೂರಿನ ಭಕ್ತನೊಬ್ಬ ತನ್ನ ಅಪಾರ್ಟಮೆಂಟ್ 18 ನೇ ಮಹಡಿಗೆ ಬಸವಪ್ಪ ಹತ್ತಲು ಸಾದ್ಯವಿಲ್ಲವೆಂದು ನಮ್ಮ ಮನೆಗೆ ಬಂದರೆ ನಾನು ಏನಾದರೂ ಮಾಡುತ್ತೇನೆ ಎಂಬ ಗೇಲಿ ಮಾಡಿದ್ದನಂತೆ. ಆದರೆ ಈ ಪವಾಡ ಬಸವ ಎಲ್ಲರ ಹುಬ್ಬೇರುವಂತೆ 18 ನೇ ಮಹಡಿಯ ಆತನ ಮನೆಗೆ ತೆರಳಿ ಎಲ್ಲರಿಗೂ ಅಚ್ಚರಿಯಾಗುವಂತೆ ಮಾಡಿತ್ತು. ನಂತರ ಆತ ಬಸವಪ್ಪನ ಕ್ಷಮೆ ಕೋರಿ ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸಿದ್ದನಂತೆ.

ಈ ಬಸವ ಯಾರ ಮನೆಗೆ ಭೇಟಿ ಕೊಡುತ್ತೋ ಆ ಮನೆಯ ಕೆಲವು ಸೂಕ್ಷ್ಮತೆಗಳನ್ನ ತನ್ನ ಕಾಲು, ಕೊಂಬುಗಳ ಮೂಲಕ ತಿಳಿಸುತ್ತಿತ್ತು. ಸಾವಿರಾರು ಭಕ್ತರು ಬಹಳ ಗೌರವಾದರಗಳಿಂದ ಈ ಬಸವಪ್ಪನನ್ನು ಕಾಣುತ್ತಾರೆ. ಯಾರೇ ಆಗಲಿ ಇಲ್ಲಿನ ಬಸವಪ್ಪನ್ನ ಮುಂದೆ ಸುಳ್ಳು ಹೇಳಿದರೆ ಒದೆತಿನ್ನುವುದು ಕಟ್ಟಿಟ್ಟಬುತ್ತಿ. ತಪ್ಪು ಮಾಡಿದವರು ಇದರ ಮುಂದೆ ಬರಲು ಹಿಂದೇಟು ಹಾಕುತ್ತಿದ್ದರು. ಒಮ್ಮೆ ಆಕಸ್ಮಿಕವಾಗಿ ಇಲ್ಲಿನ ಧರ್ಮದರ್ಶಿಗಳು ಮಲ್ಲೇಶ್ ಗುರೂಜಿ ಮಾಡಿದ ಒಂದು ತಪ್ಪಿಗೆ ಭರ್ಜರಿ ಪೆಟ್ಟು ತಿಂದಿದ್ದಾರೆ. ಒಟ್ಟಿನಲ್ಲಿ ತಪ್ಪು ಮಾಡಿದವರಿಗೆ ಈ ಬಸವನಿಂದ ಅಲ್ಲೇ ಡ್ರಾ ಅಲ್ಲೇ ಬಹುಮಾನ ನೀಡುತ್ತಿತ್ತು.

ಬಡವರ ಆಶಾಕಿರಣ ಈ ಬಸವಪ್ಪ :ಈ ಬಸವಣ್ಣನ ಮತ್ತೊಂದು ಪವಾಡ ಅಂದ್ರೆ ಒಂದು ದಿನ ಕೊಪ್ಪಳ ಜಿಲ್ಲೆಯ ವ್ಯಕ್ತಿಯೋರ್ವ ಈ ಬಸವಣ್ಣನಿಗೆ ಕಾಗದ ಬರೆದು ನಮ್ಮ ಕಷ್ಟ ಪರಿಹರಿಸಬೇಕೆಂದು ಕೇಳಿಕೊಳ್ಳುತ್ತಾನೆ. ಕೂಡಲೇ ಬಸವಣ್ಣ ಚನ್ನಪಟ್ಟಣದಿಂದ ಕೊಪ್ಪಳ‌ ಜಿಲ್ಲೆಗೆ ಹೋಗಿ ಅಲ್ಲಿ‌ ಭಕ್ತನ ಕಷ್ಟವನ್ನ ಕಣ್ಣಾರೆ ನೋಡಿ, ತನ್ನ ಮೈ ಮೇಲೆ ಇದ್ದ 1.50 ಲಕ್ಷ ರೂ. ಹಣವನ್ನ ತಲೆ ಆಡಿಸಿ ಕೆಳಕ್ಕೆ ಬೀಳಿಸಿ ಮನೆ ಕಟ್ಟಿಸಿಕೊಳ್ಳುವಂತೆ ಸಹಾಯ ಮಾಡಿತ್ತು. ಕೂಡಲೇ ಆ ಭಕ್ತ ಬಸವಣ್ಣ ನೀಡಿದ ಹಣದ ಜೊತೆಗೆ ಅಲ್ಪ ಸ್ವಲ್ಪ ಹಣ ಒದಗಿಸಿಕೊಂಡು ತನ್ನದೇ ಆದ ಸ್ಬಂತ ಸೂರನ್ನ ಈಗ ಕಟ್ಟಿಸಿಕೊಂಡಿದ್ದಾನೆ. ಇಂತಹ ಪರೋಪಕಾರಿ ಬಸವಣ್ಣ ಇಂದು ನಮ್ಮನ್ನು ಆಗಲಿರುವುದು ವಿಷಾದನೀಯ ಸಂಗತಿಯಾಗಿದೆ.

ಬಸವಪ್ಪ ಗೌಡಗೆರೆ ಕ್ಷೇತ್ರದ ಮುಕುಟಮಣಿಯಂತಿದ್ದ. ದೇವಾಲಯದ ಧರ್ಮದರ್ಶಿ ಡಾ. ಮಲ್ಲೇಶ್ ಗುರೂಜಿ ನೇತೃತ್ವದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳತ್ತಿದ್ದಾರೆ. ಅಂತಿಮ ದರ್ಶನ ಪಡೆಯಲು ಕ್ಷೇತ್ರಕ್ಕೆ ಭಕ್ತರು ದೌಡಾಯಿಸುತ್ತಿದ್ದಾರೆ. ದೇವಾಲಯದ ಆವರಣದಲ್ಲೇ ಮಾರ್ಚ್ 7 ರಂದು ಸೋಮವಾರ ಮ. 12 ಗಂಟೆಗೆ ಪವಾಡ ಪುರುಷ ಬಸವಪ್ಪನ ಅಂತ್ಯ ಸಂಸ್ಕಾರ ಜರುಗಲಿದೆ.

ಒಟ್ಟಿನಲ್ಲಿ ಇಲ್ಲಿನ ಪವಾಡ ಬಸವಪ್ಪ ನೊಂದವರ ಪಾಲಿನ ಆಶಾಕಿರಣವಾಗಿದ್ದು. ಲಕ್ಷಾಂತರ ನೊಂದ ಜನರ ಕಣ್ಣೀರು ಒರೆಸಿದೆ. ಇಂದು ಈ ಪವಾಡ ಬಸವಣ್ಣ ಇಲ್ಲ ಎಂಬುದೇ ದುಃಖಕರ ವಿಷಯವಾಗಿದೆ.

Last Updated : Mar 6, 2022, 3:55 PM IST

For All Latest Updates

TAGGED:

ABOUT THE AUTHOR

...view details