ರಾಮನಗರ: ರಾಮನಗರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕಳ್ಳತನವಾಗಿದೆ. 2000 ಪ್ರತಿಗಳಿದ್ದ ಪರ್ಮಿಟ್ ಬಾಕ್ಸ್ ನಾಪತ್ತೆಯಾಗಿದೆ. ಒಟ್ಟು 13 ಪರ್ಮಿಟ್ ಬಾಕ್ಸ್ನಲ್ಲಿ ಒಂದು ಬಾಕ್ಸ್ ಕಳ್ಳತನವಾಗಿದ್ದು, ಕಚೇರಿ ಕೊತ್ತಿಪುರದ ಜನನಿಬಿಡ ಪ್ರದೇಶದಲ್ಲಿದೆ. ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯದಿಂದ ಭಾರೀ ಎಡವಟ್ಟಾಗಿದ್ದು, ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಮೇಲೆ ಅನುಮಾನ ವ್ಯಕ್ತವಾಗಿದ್ದು, ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನುಮಾನಕ್ಕೆ ಕಾರಣವಾದ ಪರ್ಮೀಟ್ ಬಾಕ್ಸ್ ಕಳವು: ಜನವರಿ 15 ರಂದು ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಕಳವಾಗಿದ್ದು, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿಯಲ್ಲೇ ಕಳವಾಗಿದೆ. ಉಪನಿರ್ದೇಶಕ ಲೋಕೇಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಒಂದು ಬಾಕ್ಸ್ನಲ್ಲಿ ಕನಿಷ್ಟ 2000 ಪರ್ಮಿಟ್ ಪತ್ರ ಇರಲಿದ್ದು, ಖನಿಜ ಸಾಗಣೆಯ ಪರ್ಮಿಟ್ ಪತ್ರಗಳಿರುವ ಬಾಕ್ಸ್ಗಳ ಕಳವಾಗಿದೆ. ಪರ್ಮಿಟ್ ಬಾಕ್ಸ್ ಕಳವು ಭಾರೀ ಅನುಮಾನಕ್ಕೆ ಕಾರಣವಾಗಿದೆ.
ಈ ಕುರಿತು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಲೋಕೇಶ್ ಅವರು ಮಾತನಾಡಿ, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿಯಲ್ಲಿ ಖನಿಜ ಸಾಗಣೆಯ ಪರ್ಮಿಟ್ ಪತ್ರಗಳಿರುವ ಬಾಕ್ಸ್ ಅನ್ನು ಇಟ್ಟಿದ್ದರು. ಅವತ್ತು 15 ನೇ ತಾರೀಖಿನಂದು ಪರ್ಮಿಟ್ ಬಾಕ್ಸ್ ಕಳವು ಆಗಿರುವ ಬಗ್ಗೆ ಮಾಹಿತಿ ಕೊಟ್ಟರು.
ನಮಗೆ ಯಾರ ಮೇಲೂ ಅನುಮಾನವಿಲ್ಲ: ಅನಂತರ ನಾವು ಹೋಗಿ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೆವು. ಖನಿಜ ಸಾಗಾಣಿಕೆಗೆ ಹೋಗುವ ಪರವಾನಿಗೆಗೆ ಬಳಸುವ ಪರ್ಮಿಟ್ ಆಗಿತ್ತು. ಅಲ್ಲಿ ಸುಮಾರು 13 ಬಾಕ್ಸ್ ಇದ್ದವು. ಅದರಲ್ಲಿ ಈಗ ಒಂದು ಬಾಕ್ಸ್ ಇಲ್ಲದಂತಾಗಿದೆ. ಒಂದು ಬಾಕ್ಸ್ನಲ್ಲಿ 20 ಬುಕ್ಗಳು ಇರುತ್ತವೆ. ಒಂದು ಬುಕ್ನಲ್ಲಿ 100 ಹಾಳೆಗಳು ಇರುತ್ತವೆ. ಸಿಸಿಟಿವಿ ಸಾರ್ಟ್ ಸರ್ಕ್ಯೂಟ್ನಿಂದ ಹಾಳಾಗಿದೆ. ಅದನ್ನು ರಿಪೇರಿಗೆ ಕೊಂಡೊಯ್ಯಲಾಗಿದೆ. ಹೀಗಾಗಿ ಪರಿಶೀಲನೆ ನಡೆಸಲು ಸಾಧ್ಯವಾಗಲಿಲ್ಲ. ನಮಗೆ ಯಾರ ಮೇಲೂ ಅನುಮಾನವಿಲ್ಲ.