ರಾಮನಗರ:ಮಗಳನ್ನು ಶಾಲೆಗೆ ಬಿಡಲು ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿಯಾದ ಪರಿಣಾಮ ತಂದೆ ಮತ್ತು ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಾಗಡಿ ಪಟ್ಟಣದ ಸಾಬರಪಾಳ್ಯದಲ್ಲಿ ನಡೆದಿದೆ.
ಕಲ್ಯಾ ಗ್ರಾಮದ ನಿವಾಸಿಗಳಾದ ಕೆಪಿ.ಯೋಗೇಶ್ (47) , ಮಗಳು ಹರ್ಷಿತಾ (14) ಮೃತ ದುರ್ದೈವಿಗಳು. ಯೋಗೇಶ್ ತಮ್ಮ ಮಗಳನ್ನು ಜಮಾಸಾಬ್ ಪಾಳ್ಯದ ಬಳಿಯ ವೆಂಕಟ್ ಪಬ್ಲಿಕ್ ಶಾಲೆಗೆ ಬಿಡಲು ಬೈಕ್‌ನಲ್ಲಿ ತೆರಳುತ್ತಿದ್ದರು. ಇನ್ನೇನು ಶಾಲೆ ಬಳಿ ತಿರುವು ತೆಗೆದುಕೊಳ್ಳಬೇಕು ಅನ್ನುವಷ್ಟರಲ್ಲಿ ಹಿಂಬಂದಿಯಿಂದ ಬಂದ ಕಾರು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಇನ್ನು ಸ್ಥಳೀಯರು ಬಂದು ಗಾಯಾಳುಗಳನ್ನು ರಕ್ಷಣೆ ಮಾಡಲು ಮುಂದಾದರೂ ಸ್ಥಳದಲ್ಲಿಯೇ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿತ್ತು. ನಂತರ ಸ್ಥಳೀಯರು ಮಾಗಡಿ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ.
ಮಾಗಡಿ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನಿಸಿದ ಪೊಲೀಸರು: ಇನ್ನು ಅಪಘಾತ ನಡೆದ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮಾಗಡಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ತಮ್ಮನ ಉಳಿಸಲು ಹೋಗಿ ಬಲಿಯಾದ ಅಣ್ಣ: ಸಂಧಾನಕ್ಕೆ ಬಂದವನನ್ನೇ ಬೆಂಕಿ ಹಚ್ಚಿ ದಹಿಸಿದ ಆರೋಪ
ಲಾರಿ ಹರಿದು ಮಹಿಳೆ ಸಾವು:ಸರಕು ಸಾಗಣೆ ಲಾರಿ, ಕೆಎಸ್ಆರ್ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟು, ಮತ್ತೋರ್ವ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ ಬಳಿ ನಡೆದಿತ್ತು. ಸಿಮೆಂಟ್ ತುಂಬಿದ್ದ ಲಾರಿ ಹರಿದ ಪರಿಣಾಮ ಅನುಷಾ (29) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದರು, ಅವರ ಸಂಬಂಧಿ ವನಜಾಕ್ಷಿ (50) ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಯಲ್ಲಿ ಅದೃಷ್ಟವಶಾತ್ 7 ವರ್ಷದ ಬಾಲಕ ಬದುಕುಳಿದಿದ್ದ.
ದೀಪಾಂಜಲಿ ನಗರದ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ನಾಯಂಡಹಳ್ಳಿ ಜಂಕ್ಷನ್ ಬಳಿ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಲಾರಿ ಅನುಷಾ ತಲೆ ಮೇಲೆ ಹರಿದಿತ್ತು. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು, ಅವರ ಸಂಬಂಧಿ ವನಜಾಕ್ಷಿ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ. ಪವಾಡ ಸದೃಶ್ಯ ಎಂಬಂತೆ ಘಟನೆಯಲ್ಲಿ ಬಾಲಕ ಬಚಾವಾಗಿದ್ದ. ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಬಳಿಕ ಕೆಎಸ್ಆರ್ಟಿಸಿ ಬಸ್ಸಿಗೆ ಲಾರಿ ಡಿಕ್ಕಿಯಾಗಿತ್ತು, ಬಸ್ ನಲ್ಲಿದ್ದವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದವು.
ಲಾರಿ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂದು ಆರೋಪಿಸಿ ಸ್ಥಳೀಯರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರು, ಬಸ್ ಹಾಗೂ ಲಾರಿ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದರು. ಈ ಸಂಬಂಧ ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.