ರಾಮನಗರ: ಶತಶತಮಾನಗಳು ಕಳೆದರೂ ಶ್ರೀರಾಮನ ಮೇಲಿರುವ ಭಾರತೀಯರ ನಂಬಿಕೆ, ಭಕ್ತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ನಮ್ಮ ನರ ನಾಡಿಗಳಲ್ಲೂ ಆ ಸೀತಾರಾಮನೇ ತುಂಬಿ ಹೋಗಿದ್ದಾನೆ. ಪ್ರಸಕ್ತ ಕಾಲಘಟ್ಟದಲ್ಲಿ ನಾವು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ರಾಮತತ್ವದಲ್ಲೇ ಪರಿಹಾರವಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ ಹೇಳಿದರು.
ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸಮೀಪದ ಶ್ರೀ ರಾಮದೇವರ ಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಪಟ್ಟಾಭಿರಾಮನ ದರ್ಶನ ಪಡೆದು ಮಾತನಾಡಿದ ಅವರು, ರಾಮನನ್ನು ನಾವೆಲ್ಲರೂ ಮತ್ತೆ ಮತ್ತೆ ಸ್ಮರಿಸುತ್ತೇವೆ. ನಿರಂತರವಾಗಿ ಪೂಜಿಸುತ್ತೇವೆ. ಭವಿಷ್ಯದಲ್ಲಿ ಇನ್ನೆಷ್ಟೇ ತಲೆಮಾರುಗಳು ಕಳೆದರೂ ಆ ಮರ್ಯಾದಾ ಪುರುಷೋತ್ತಮನ ಆದರ್ಶ, ಮೌಲ್ಯಗಳು ನಮ್ಮನ್ನು ಕೈಹಿಡಿದು ಸದಾ ನಡೆಸುತ್ತಲೇ ಇರುತ್ತವೆ ಎಂದರು.
ಅದೆಷ್ಟೋ ವರ್ಷಗಳಿಂದ ಇದ್ದ ಅಡ್ಡಿಗಳೆಲ್ಲ ನಿವಾರಣೆಯಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಬಿದ್ದ ಕೆಲ ದಿನಗಳಲ್ಲೇ ಈ ರಾಮಗಿರಿಯಲ್ಲಿ ಪಟ್ಟಾಭಿರಾಮನ ದರ್ಶನ ಭಾಗ್ಯ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಫಲ. ಸಕಲ ಪ್ರಜೆಗಳ ಪಾಲಿನ ದೈವ ಈ ರಾಮ ಸನ್ನಿಧಿಯಿಂದ ನಾನು ನೇರವಾಗಿ ಕೆಡಿಪಿ ಸಭೆಗೆ ಹೋಗುತ್ತಿದ್ದೇನೆ. ಇಂದಿನಿಂದ ಜಿಲ್ಲೆಯ ಅಭಿವೃದ್ಧಿಯಲ್ಲೂ ನವ ಶಕೆ ಆರಂಭವಾಗಲಿದೆ ಎಂದರು.
ಜಾತಿ, ಧರ್ಮ ಭೇದವಿಲ್ಲದೆ ಪ್ರತಿಯೊಬ್ಬರನ್ನು ಒಟ್ಟಿಗೆ ಕರೆದುಕೊಂಡು ಮುನ್ನಡೆಯುವುದು ನನ್ನ ಉದ್ದೇಶ. ರಾಮ ಹಾಕಿಕೊಟ್ಟ ಸನ್ಮಾರ್ಗದಲ್ಲಿಯೇ ಪ್ರಗತಿಯ ರಥ ಚಕ್ರಗಳು ಸಾಗಲಿವೆ. ಎಲ್ಲರ ಸಹಕಾರದಿಂದ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಸಾಧಿಸಬೇಕು ಎಂಬುದು ನನ್ನ ಇಚ್ಛೆಯಾಗಿದೆ. ಆ ಕಾರ್ಯಕ್ಕೆ ಈ ರಾಮ ಸನ್ನಿಧಿಯಿಂದಲೇ ಚಾಲನೆ ಸಿಕ್ಕಿದೆ ಎಂದರು.
ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿದ ಡಿಸಿಎಂ:
ಸುಮಾರು 400 ಮೆಟ್ಟಿಲುಗಳ ಎತ್ತರದ ರಾಮಗಿರಿ ಬೆಟ್ಟವನ್ನು ಅಶ್ವತ್ಥ್ ನಾರಾಯಣ ಕಾಲ್ನಡಿಗೆಯಲ್ಲಿಯೇ ಹತ್ತಿದರು. ಪುರಾಣ ಪ್ರಸಿದ್ಧವಾದ ಈ ತಾಣವನ್ನು ವೀಕ್ಷಿಸಿದರಲ್ಲದೆ, ಅಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಸಂಬಂಧಪಟ್ಟವರಿಂದ ಮಾಹಿತಿ ಪಡೆದರು. ಬಳಿಕ ಬೆಟ್ಟದ ಮೇಲಿರುವ ಪಟ್ಟಾಭಿರಾಮ ಸ್ವಾಮಿ ಹಾಗೂ ಶಿವನಿಗೆ ಪೂಜೆ ಸಲ್ಲಿಸಿದರು.
ಕ್ಷೇತ್ರದ ಐತಿಹ್ಯ, ಪ್ರಕೃತಿಗೆ ಮಾರುಹೋದ ಉಪ ಮುಖ್ಯಮಂತ್ರಿ:
ನಮ್ಮ ಪಾಲಿಗೆ ಈ ರಾಮಕ್ಷೇತ್ರ ಬಹಳ ವಿಶೇಷ. ಈ ಬೆಟ್ಟದಲ್ಲಿ ಶ್ರೀರಾಮಚಂದ್ರ ಸೀತಾ ಸಮೇತರಾಗಿ 5ರಿಂದ 6 ವರ್ಷ ತಂಗಿದ್ದರು. ಇಲ್ಲಿರುವ ಪಟ್ಟಾಭಿರಾಮ ದೇವರನ್ನು ವಾನರ ಅರಸ ಸುಗ್ರೀವನೇ ಸ್ಥಾಪಿಸಿದನೆಂದು ಹಾಗೂ ಇಲ್ಲಿರುವ ಶಿವಲಿಂಗವನ್ನು ಸಾಕ್ಷಾತ್ ಶ್ರೀರಾಮರೇ ಸ್ಥಾಪನೆ ಮಾಡಿದರೆಂದೂ ಪುರಾಣಗಳು ಹೇಳುತ್ತವೆ. ಜೊತೆಗೆ ಬೆಟ್ಟವು ರಣಹದ್ದು ಸಂರಕ್ಷಣಾ ಧಾಮವೂ ಆಗಿದೆ. ಹೀಗಾಗಿ ಸರ್ವ ರೀತಿಯಲ್ಲೂ ಈ ತಾಣವನ್ನು ಅಭಿವೃದ್ಧಿ ಮಾಡಲಾಗುವುದು ಎಂದರು.