ಕರ್ನಾಟಕ

karnataka

ETV Bharat / state

ರಾಮನಗರ: ಕರ್ತವ್ಯ ವೇಳೆಯಲ್ಲೇ 'ಗುಂಡು' ಹಾಕಿದ ಎಎಸ್ಐ; ಮೂವರು ಸಸ್ಪೆಂಡ್‌! - ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಪೊಲೀಸರು ಕುಡಿದ ಅಮಲಿನಲ್ಲಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

Suspended ASI
ಅಮಾನತಾದ ಎಎಸ್​ಐ

By

Published : Jun 23, 2023, 10:19 PM IST

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಾರ್ತಿಕ್​ ರೆಡ್ಡಿ

ರಾಮನಗರ:ಕರ್ತವ್ಯದಲ್ಲಿದ್ದ ವೇಳೆಯಲ್ಲೇ ಪಾನಮತ್ತರಾಗಿ ಸಾರ್ವಜನಿಕರೊಂದಿಗೆ ಕಿರಿಕ್​ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಎಎಸ್​ಐ ಸೇರಿ ಮೂವರು ಪೊಲೀಸರನ್ನು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಾರ್ತಿಕ್​ ರೆಡ್ಡಿ ಶುಕ್ರವಾರ ಅಮಾನತು ಮಾಡಿದ್ದಾರೆ. ಮಾಗಡಿ ಪೊಲೀಸ್​ ಠಾಣೆಯ ಎಎಸ್​ಐ ಮಂಜುನಾಥ್​ ಕೆ.ಎನ್​., ಡಿಸಿಆರ್​ಬಿ ಘಟಕದ ಎಎಸ್​ಐ ಗೋವಿಂದಯ್ಯ ಜಿ.ಎಸ್​ ಮತ್ತು ಚನ್ನಪಟ್ಟಣ ಪುರ ಪೊಲೀಸ್​ ಠಾಣೆ ಹೆಡ್‌ ಕಾನ್​ಸ್ಟೆಬಲ್​ ನಾರಾಯಣ ಮೂರ್ತಿ ಅಮಾನತುಗೊಂಡಿದ್ದಾರೆ.

ಮೈಮೇಲೆ ಪ್ರಜ್ಞೆ ಇಲ್ಲದೇ ಯೂನಿಫಾರ್ಮ್ ಕಳಚಿಟ್ಟಿದ್ದು, ನಂತರ ಕಾರು ಚಾಲಕನೊಂದಿಗೆ ಕಿರಿಕ್ ಮಾಡಿಕೊಂಡು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪಗಳ ಮೇರೆಗೆ ಅಮಾನತು ಮಾಡಲಾಗಿದೆ. ಮದ್ಯದ ಅಮಲಿನಲ್ಲಿದ್ದ ಪೊಲೀಸರು ಕಾರಿನಲ್ಲಿ ಹೋಗುತ್ತಿದ್ದಾಗ ಮಾರ್ಗಮಧ್ಯೆ ಸಾರ್ವಜನಿಕರನ್ನೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ನಿಂದಿಸಿದ ಪೊಲೀಸರ ಕಾರನ್ನು ಸಾರ್ವಜನಿಕರು ಹಿಂಬಾಲಿಸಿ, ಅಡ್ಡಗಟ್ಟಿದ್ದಾರೆ. ಪೊಲೀಸರನ್ನು ಸಾರ್ವಜನಿಕರು ಪ್ರಶ್ನಿಸಿದ್ದು, ಆಗಲೂ ಪೊಲೀಸರು ಅಮಲಿನಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ಈ ಎಲ್ಲ ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲ್​ನಲ್ಲಿ ವೀಡಿಯೋ ಮಾಡಿದ್ದಾರೆ. ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ವೈರಲ್​ ವಿಡಿಯೋ

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಕರ್ತವ್ಯನಿರತ ಪೊಲೀಸರು ಪಾನಮತ್ತರಾಗಿ, ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದು ಕಂಡು ಬಂದಿದೆ. ಇಬ್ಬರು ಎಎಎಸ್ಐ, ಓರ್ವ ಹೆಡ್ ಕಾನ್ಸ್‌ಟೇಬಲ್ ಸದ್ಯ ಅಮಾನತಿನಲ್ಲಿಟ್ಟು ಇಲಾಖೆಯಿಂದ ಹೆಚ್ಚಿನ ತನಿಖೆ ಮಾಡುತ್ತಿದ್ದೇವೆ. ಅದರಲ್ಲಿ ಇಬ್ಬರು ಎಎಸ್ಐ ಮಂಜುನಾಥ್ ಮತ್ತು ನಾರಾಯಣಮೂರ್ತಿ ಇಬ್ಬರೂ ಇಲಾಖೆಗೆ ಯಾವುದೇ ಮಾಹಿತಿ ನೀಡದೆ ದೀರ್ಘಾವಧಿ ಕರ್ತವ್ಯಕ್ಕೆ ಗೈರಾಗಿದ್ದರು. ಯಾರು 21 ದಿನಗಳಿಂತ ಹೆಚ್ಚು ಅನ್​ಆಥರೈಸ್ಡ್​ ಗೈರಾಗುತ್ತಾರೋ ಅವರಿಗೆ ನೋಟಿಸ್​ ಜಾರಿ ಮಾಡಲಾಗುತ್ತದೆ. ಇವರಿಗೂ ನಾವು ನೋಟೀಸ್​ ಜಾರಿ ಮಾಡಿದ್ದೇವೆ. ನಿನ್ನೆ ಕರ್ತವ್ಯಕ್ಕೆ ಹಾಜರಾಗಲು ಕಚೇರಿಗೆ ಬಂದು, ನಮ್ಮ ಕಚೇರಿಯಲ್ಲಿದ್ದ ಗೋವಿಂದಪ್ಪ ಎನ್ನುವವರ ಜೊತೆ ಸೇರಿ ಊಟಕ್ಕೆ ಹೋಗಿ, ಅಲ್ಲಿ ಕುಡಿದು ಬಂದಿದ್ದಾರೆ ಎನ್ನುವ ಮಾಹಿತಿ ಇದೆ. ಈ ಬಗ್ಗೆ ತನಿಖೆ ನಡೆಸಿ ಮೂವರನ್ನು ಅಮಾನತು ಮಾಡಲಾಗಿದೆ. ಇಲಾಖೆ ತನಿಖೆಯನ್ನು ಪ್ರಾರಂಭಿಸುತ್ತೇವೆ. ಇಂತಹ ಪ್ರಕರಣಗಳಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತೆ. ಸಾರ್ವಜನಿಕರಿಗೂ ಇಲಾಖೆ ಮೇಲೆ ಕೆಟ್ಟ ಅಭಿಪ್ರಾಯ ಬರುತ್ತದೆ. ಹಾಗಾಗಿ ಮೂವರನ್ನು ಅಮಾನತು ಮಾಡಿ ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ತುಮಕೂರು ಹೆದ್ದಾರಿಯಲ್ಲಿ ಲಾರಿ ಚಾಲಕರಿಂದ ಲಂಚ: ಎಎಸ್‌ಐ, ಜೀಪ್‌ ಚಾಲಕ ಸಸ್ಪೆಂಡ್‌- ವಿಡಿಯೋ ವೈರಲ್

ABOUT THE AUTHOR

...view details