ರಾಮನಗರ:ಸಂಸದೆ ಸುಮಲತಾ ಅವರು ಸಹ ನನ್ನ ಜೊತೆಗೆ ಸಂಪರ್ಕದಲ್ಲಿದ್ದಾರೆ. ಸಂಕ್ರಾಂತಿ ನಂತರ ಅವರು ಒಂದು ನಿರ್ಧಾರಕ್ಕೆ ಬರುತ್ತಾರೆ ಎಂದು ಸಂಸದೆ ಸುಮಲತಾ ಬಿಜೆಪಿ ಸೇರುವ ವಿಚಾರವಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಕ್ಕರೆ ಗ್ರಾಮದಲ್ಲಿ ಮಾತನಾಡಿದ ಅವರು, ಜ.16-17 ನೇ ತಾರೀಖು ಮುಗಿದ ನಂತರ ಎಲ್ಲವೂ ಬದಲಾಗಲಿದ್ದು, ಸಾಕಷ್ಟು ಮಂದಿ ಬಿಜೆಪಿ ಪಕ್ಷ ಸೇರಲಿದ್ದಾರೆ ಎಂಬ ಸುಳಿವು ನೀಡಿದರು.
ಬಿಜೆಪಿ - ಜೆಡಿಎಸ್ ಮೈತ್ರಿ ಇಲ್ಲ: ಮಂಡ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ದೋಸ್ತಿ ವಿಚಾರವಾಗಿ ನನಗೆ ಮಾಹಿತಿ ಇಲ್ಲ. ಆದರೆ,ಮುಂದಿನ ಬಾರಿ ಬಿಜೆಪಿ- ಜೆಡಿಎಸ್ ಮೈತ್ರಿ ಇರುವುದಿಲ್ಲ. ಸ್ವತಂತ್ರವಾಗಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್- ಜೆಡಿಎಸ್ ದೋಸ್ತಿ ಬಗ್ಗೆ ಗೊತ್ತಿಲ್ಲ ಎಂದರು. ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ರಾಜ್ಯಮಟ್ಟದ ನಾಯಕರು. ಅವರು ಎಲ್ಲಿ ಬೇಕಾದರೂ ಕೂಡ ಸ್ಪರ್ಧೆ ಮಾಡಬಹುದು. ಕುಮಾರಸ್ವಾಮಿ ಸಹ ಸಾತನೂರು, ಚಿಕ್ಕಬಳ್ಳಾಪುರ, ರಾಮನಗರ, ಈಗ ಚನ್ನಪಟ್ಟಣದಲ್ಲಿಯೂ ಸ್ಪರ್ಧೆ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ನಲ್ಲಿ2 ಗುಂಪಿದೆ: ಪ್ರಧಾನಿ ಮೋದಿ ರಾಜ್ಯ ಪ್ರವಾಸಕ್ಕೆ ಕಾಂಗ್ರೆಸ್ - ಜೆಡಿಎಸ್ ನಾಯಕರ ಟೀಕೆ ವಿಚಾರವಾಗಿ ಟಾಂಗ್ ಕೊಟ್ಟ ಯೋಗೇಶ್ವರ್, ವಿರೋಧಿಗಳಿಗೆ ಪ್ರಧಾನಿಗಳ ಬಗ್ಗೆ ಭಯ ಇದೆ. ಹಾಗಾಗಿ ಅವರು ಅವರ ಬಗ್ಗೆ ಟೀಕೆ ಮಾಡುತ್ತಾರೆ. ಬಿಜೆಪಿಗೆ ಅವರೇ ದೊಡ್ಡ ಬಲ, ಅದಕ್ಕಾಗಿ ಟೀಕೆ ಮಾಡುತ್ತಾರೆ. ಕಾಂಗ್ರೆಸ್ನಲ್ಲಿ ಸಹ ಎರಡು ಗುಂಪಿದೆ. ಸಿಎಂ ಸ್ಥಾನಕ್ಕಾಗಿ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕಿತ್ತಾಡುತ್ತಿದ್ದಾರೆ. ಜೊತೆಯಲ್ಲಿದ್ದರೂ ಸಹ ಒಳಗೆ ಗುಂಪುಗಾರಿಕೆ ಇದೆ. ಹಾಗಾಗಿ ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದರು.
ಕಾಂಗ್ರೆಸ್ನಿಂದ 200 ಯೂನಿಟ್ ಉಚಿತ ವಿದ್ಯುತ್ ಪ್ರಣಾಳಿಕೆ ವಿಚಾರವಾಗಿ ಮಾತನಾಡಿದ ಅವರು, ಯಾವುದೇ ಉಚಿತ ಸೌಲಭ್ಯ ನೀಡಿದರೂ ಸಹ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ. ಇದೆಲ್ಲವೂ ಸಹ ಯಾವುದೇ ಉಪಯೋಗ ಆಗಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಅವರು ಉಚಿತವಾಗಿ ಕೊಡಲು ಸಾಧ್ಯವಾಗಲ್ಲ ಎಂದು ಸಿ.ಪಿ.ಯೋಗೇಶ್ವರ್ ಟಾಂಗ್ ನೀಡಿದರು.