ರಾಮನಗರ:ಅರ್ಚಕರಹಳ್ಳಿ ಬಳಿಯರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕಳೆದ 16 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕ್ಯಾಂಪಸ್ ನಿರ್ಮಾಣವವೇ ಗೊಂದಲದ ಗೂಡಾಗಿತ್ತು. ಎಲ್ಲಾ ಸಮಸ್ಯೆಗಳನ್ನು ಎದುರಿಸಿ, ಪರಿಹಾರ ಒದಗಿಸುವ ಕೆಲಸ ಮಾಡಲಾಗಿದೆ. ನೆನೆಗುದಿಗೆ ಬಿದ್ದಿದ್ದ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ರಾಮನಗರ ಹೊಸ ಜಿಲ್ಲೆಯಾಗಿದ್ದು, ಮೆಡಿಕಲ್ ಕಾಲೇಜು ಸಂಕೀರ್ಣದಿಂದ ಎಲ್ಲ ತಾಲೂಕುಗಳಿಗೂ ಅನುಕೂಲ ಆಗಲಿದೆ. ಹಲವು ಯೋಜನೆಗಳು ಸಾಕಾರಗೊಳ್ಳುತ್ತಿವೆ. ಇದರ ಜೊತೆಗೆ ಹೈಟೆಕ್ ರೇಷ್ಮೆ ಮಾರುಕಟ್ಟೆ ರಾಜ್ಯದಲ್ಲಿಯೇ ದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ. ಮಾರುಕಟ್ಟೆ ನಿಯಂತ್ರಣ ಸಾಧ್ಯವಾಗಲಿದೆ. ಉತ್ತಮ ಬೆಲೆಯೂ ರೈತರಿಗೆ ಸಿಗಲಿದೆ. ಇನ್ನು ಮಾವು ಸಂಸ್ಕರಣಾ ಘಟಕಕ್ಕೆ ಚಾಲನೆ ನೀಡಿದ್ದು ಇದರಿಂದ ರೈತರಿಗೆ ಅನುಕೂಲ ಆಗಲಿದೆ ಎಂದು ಹೇಳಿದರು.
ಹಿಂದಿನ ಸರ್ಕಾರದ ಘೋಷಣೆಗಳು ಬರೀ ಘೋಷಣೆಗಳೇ ಆಗಿದ್ದವು - ಸಿಎಂ:ಹಿಂದಿನ ಸರ್ಕಾರ ಆರಂಭಿಸಿದ್ದ ಹಲವು ಯೋಜನೆಗಳಿಗೆ 650 ಕೋಟಿ ಅನುದಾನ ನೀಡಿದ್ದೇವೆ. ಯಾವುದೇ ತಾರತಮ್ಯ ಮಾಡಿಲ್ಲ. ಇಲ್ಲಿ 1 ಸಾವಿರ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಆಗಲಿದ್ದು, ಚಿಕಿತ್ಸೆ ಹಾಗೂ ಸಂಶೋಧನೆಗೂ ಸಹಕಾರ ಆಗಲಿದೆ. ಭಾರತದಲ್ಲಿಯೇ ಇದು ಬಹುದೊಡ್ಡ ಆರೋಗ್ಯ ಕೇಂದ್ರವಾಗಿ ಬೆಳೆಯಲಿದೆ. ಈ ಭಾಗದ ಸಮಗ್ರ ಅಭಿವೃದ್ಧಿಗೆ ಕಾರಣರಾದ ಕೆಂಗಲ್ ಹನುಮಂತಯ್ಯ ಅವರ ಹೆಸರು ನಾಮಕರಣ ಮಾಡಲು ಸಿಂಡಿಕೇಟ್ ಸಮಿತಿ ಮೂಲಕ ಪ್ರಸ್ತಾವ ಸಲ್ಲಿಸಲು ಸೂಚನೆ ನೀಡಲಾಗುವುದು. ಹಿಂದಿನ ಸರ್ಕಾರದ ಘೋಷಣೆಗಳು ಬರೀ ಘೋಷಣೆಗಳೇ ಆಗಿದ್ದವು. ಆದರೆ ಸಮಾಜಕ್ಕೆ ನ್ಯಾಯ ಸಲ್ಲಿಸುವ ಕೆಲಸ ಆಗಿರಲಿಲ್ಲ. ಭಾಷಣಗಳಿಂದ ಜನರ ಹೊಟ್ಟೆ ತುಂಬುವುದಿಲ್ಲ. ಜನರ ಸಮಸ್ಯೆಗೆ ಪರಿಹಾರ ನೀಡುವ ಜನೋಪಯೋಗಿ ನಾಯಕರು ಸಮಾಜಕ್ಕೆ ಬೇಕಿದೆ ಎಂದು ಹೇಳಿದರು.
ಬೆಂಗಳೂರು - ಮೈಸೂರು ಹೆದ್ದಾರಿ ನಮ್ಮ ಯೋಜನೆ - ಸಿಎಂ: ಬೆಂ-ಮೈ ಹೆದ್ದಾರಿ ಉದ್ಘಾಟನೆ ನಮ್ಮ ಯೋಜನೆ. ಅದರ ಡಿಪಿಆರ್ ಆಗಿದ್ದೇ 2016ರಲ್ಲಿ. ಆಗ ಪ್ರಧಾನಿ ಇದ್ದವರು ಯಾರು? 2019ರಲ್ಲಿ ಅದಕ್ಕೆ ಅಡಿಗಲ್ಲು ಹಾಕಿದವರು ಯಾರು? ತಾವು ಮಾಡದೇ ಇರುವ ಕೆಲಸವನ್ನು ನಾವು ಮಾಡಿದ್ದೇವೆ ಎನ್ನುವರಿಗೆ ನಾಚಿಕೆ ಆಗಬೇಕು. ಎಂದಿಗೂ ಸತ್ಯಕ್ಕೆ ಜಯವೇ ಸಿಗಲಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ಗೆ ತಿರುಗೇಟು ನೀಡಿ ರಾಮನಗರ ರಾಮರಾಜ್ಯ ಆಗಲು ಜನರು ಆಶೀರ್ವಾದ ನೀಡಬೇಕು ಎಂದು ಸಿಎಂ ಬೊಮ್ಮಾಯಿ ಮನವಿ ಮಾಡಿದರು.