ರಾಮನಗರ: ಮುಂದಿನ ಫೆಬ್ರವರಿ ತಿಂಗಳ ಅಂತ್ಯಕ್ಕೆ ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆಯಾಗಲಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅಥವಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕರೆದು ಉದ್ಘಾಟನೆ ಮಾಡಿಸಲಾಗುವುದು ಎಂದು ಕೇಂದ್ರ ಜಲಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು. ಇಂದು ರಾಮನಗರಕ್ಕೆ ಹೆಲಿಕಾಪ್ಟರ್ನಲ್ಲಿ ಆಗಮಿಸಿದ ನಿತಿನ್ ಗಡ್ಕರಿ, ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಪರಿಶೀಲನೆ ನಡೆಸಿದರು. ಇದಕ್ಕೂ ಮುನ್ನ ಭಾರತ್ ಮಾಲಾ ಯೋಜನೆಯಡಿ ನಿರ್ಮಾಣ ಆಗುತ್ತಿರುವ ಚೆನ್ನೈ ಎಕ್ಸ್‌ಪ್ರೆಸ್ ಹೈವೇ ಕಾಮಗಾರಿಯನ್ನು ಹೊಸಕೋಟೆ ತಾಲೂಕಿನ ಕರಿಬೀರನಹೊಸಹಳ್ಳಿ ಪರಿಶೀಲನೆ ನಡೆಸಿದರು. ಬಳಿಕ ರಾಮನಗರಕ್ಕೆ ಆಗಮಿಸಿದರು. ಬಸ್ನಲ್ಲಿ ತೆರಳಿ ದಶಪಥ ಹೆದ್ದಾರಿಯನ್ನು ಸಚಿವರು ಪರಿಶೀಲಿಸಿದರು.
ಬೆಂಗಳೂರು-ಮೈಸೂರು ಜರ್ನಿ ಇನ್ಮುಂದೆ ಕೇವಲ 90 ನಿಮಿಷ ಮಾತ್ರ.. ನಂತರ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿತಿನ್ ಗಡ್ಕರಿ ಅವರು, ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅಥವಾ ರಾಷ್ಟ್ರಪತಿಗಳು ದಶಪಥ ಹೆದ್ದಾರಿಯನ್ನು ಉದ್ಘಾಟಿಸಲಿದ್ದಾರೆ. ಸ್ಥಳೀಯ ಶಾಸಕರು ಮತ್ತು ಸಂಸದರು ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ. ಎಲ್ಲವನ್ನೂ ಪರಿಶೀಲನೆ ಮಾಡಲಾಗುವುದು. ಹೆದ್ದಾರಿ ಪೂರ್ಣಗೊಂಡ ಬಳಿಕ 90 ನಿಮಿಷದಲ್ಲಿ ಬೆಂಗಳೂರು-ಮೈಸೂರು ನಡುವೆ ಸಂಚಾರ ಮಾಡಬಹುದು. ಹೆದ್ದಾರಿಯಿಂದ ಮೈಸೂರು, ಶ್ರೀರಂಗಪಟ್ಟಣ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಪಬ್ಲಿಕ್ ಟ್ರಾನ್ಸ್ಪೋರ್ಟ್ಗೂ ಹೆಚ್ಚಿನ ಒತ್ತು ನೀಡ್ತೇವೆ. ರಾಮನಗರ ಹಾಗೂ ಮಂಡ್ಯ ಜಿಲ್ಲೆಗೆ ಕನೆಕ್ಟಿವಿಟಿ ಸುಗಮ ಆಗಲಿದೆ. ಐಟಿ ಉದ್ಯಮಕ್ಕೂ ಇದು ಅನುಕೂಲ ಎಂದು ತಿಳಿಸಿದರು.
ಶೀಘ್ರದಲ್ಲೇ ಮಹತ್ವಾಕಾಂಕ್ಷೆಯ ಯೋಜನೆಗಳ ಕಾಮಗಾರಿ ಭರವಸೆ.. ಇದಲ್ಲದೆ ಕೇಂದ್ರದಿಂದ ಮುಂದಿನ ದಿನಗಳಲ್ಲಿ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಘೋಷಣೆ ಮಾಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಅನ್ನು ಅಭಿವೃದ್ಧಿಯ ಹೆದ್ದಾರಿ ಎಂದು ಬಣ್ಣಿಸಿದರು. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅಭಿವೃದ್ಧಿಪಡಿಸಿದ 26 ಹಸಿರು ಮೋಟಾರ್ ಕಾರಿಡಾರ್‌ಗಳ ಭಾಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೇ 2022 ರಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಈ ಎಕ್ಸ್‌ಪ್ರೆಸ್‌ವೇ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಮೂಲಕ ಹಾದು ಹೋಗಲಿದೆ ಎಂದರು.