ಕರ್ನಾಟಕ

karnataka

ETV Bharat / state

ಆನೆ ದಾಳಿಯಲ್ಲಿ ಮೃತಪಟ್ಟ ವೀರಭದ್ರಯ್ಯ ಕುಟುಂಬಕ್ಕೆ ₹ 15 ಲಕ್ಷ ಪರಿಹಾರ ವಿತರಿಸಿದ ಸರ್ಕಾರ - ಈಟಿವಿ ಭಾರತ್​ ಕನ್ನಡ ನ್ಯೂಸ್​

ಮೃತ ವೀರಭದ್ರಯ್ಯ ಕುಟುಂಬಕ್ಕೆ ಸಾಂತ್ವನ ಹೇಳಲು ಈಶ್ವರ ಖಂಡ್ರೆ ಮತ್ತು ಡಿ.ಕೆ ಸುರೇಶ್ ಮುತ್ತುರಾಯನ ದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿದ್ದರು.

15 ಲಕ್ಷ ರೂ. ಪರಿಹಾರ
15 ಲಕ್ಷ ರೂ. ಪರಿಹಾರ

By

Published : Jun 4, 2023, 6:39 PM IST

Updated : Jun 4, 2023, 7:54 PM IST

ಮೃತನ ಕುಟುಂಬಸ್ಥರಿಗೆ 15 ಲಕ್ಷ ರೂ. ಚೆಕ್​ ನೀಡಿದ ಈಶ್ವರ ಖಂಡ್ರೆ ಮತ್ತು ಡಿ.ಕೆ ಸುರೇಶ್

ರಾಮನಗರ : ನಿನ್ನೆ (ಶನಿವಾರ) ವಿರುಪಸಂದ್ರ ಗ್ರಾಮದಲ್ಲಿ ಮಾವಿನ ತೋಟ ಕಾಯುತ್ತಿದ್ದ ವೀರಭದ್ರಯ್ಯ ಎಂಬುವರು ಆನೆ ದಾಳಿಯಿಂದ ಮೃತಪಟ್ಟಿದ್ದರು. ಈ ಹಿನ್ನೆಲೆ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಲು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಮತ್ತು ಸಂಸದ ಡಿ.ಕೆ ಸುರೇಶ್ ಅವರು ಇಂದು ಕನಕಪುರ ಬಳಿಯ ಮುತ್ತುರಾಯನ ದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಸಾಂಕೇತಿಕವಾಗಿ 15 ಲಕ್ಷ ರೂ.ಗಳ ಪರಿಹಾರದ ಚೆಕ್​ ಅನ್ನು ಮೃತನ ಕುಟುಂಬಸ್ಥರಿಗೆ ವಿತರಿಸಿದರು. ಮೃತರ ಪತ್ನಿ ಮತ್ತು ಕುಟುಂಬದವರಿಗೆ ಬ್ಯಾಂಕ್ ಖಾತೆ ಇಲ್ಲದ ಕಾರಣ ತಕ್ಷಣವೇ ಬ್ಯಾಂಕ್ ಖಾತೆ ಮಾಡಿಸಿ ಆರ್​ಟಿಜಿಎಸ್ ಮೂಲಕ ಹಣ ಜಮಾ ಮಾಡುವಂತೆ ಸಚಿವರು ಹಾಗೂ ಸಂಸದರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು. ಹಾಗೂ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವಂತೆ ಸಹ ಪಾಲಕರಿಗೆ ಮನವಿ ಮಾಡಿದರು.

ಆನೆ ಕಾರ್ಯಪಡೆ ರಚನೆ ಭರವಸೆ:ಚೆಕ್​ ವಿತರಣೆ ಬಳಿಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ರಾಮನಗರ ಅರಣ್ಯ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತದನಂತರ ಸುದ್ದಿಗಾರರೊಂದಿಗೆ ಮಾತನಾಡಿ, ''ಆನೆ ಮತ್ತು ಮಾನವನ ಸಂಘರ್ಷ ನಿಯಂತ್ರಣಕ್ಕೆ ನಾಡಿಗೆ ಬಂದ ಆನೆಗಳನ್ನು ತ್ವರಿತವಾಗಿ ಕಾಡಿಗಟ್ಟಲು ಬನ್ನೇರುಘಟ್ಟ ಮತ್ತು ರಾಮನಗರದಲ್ಜಿ ಎರಡು ಆನೆ ಕಾರ್ಯಪಡೆಗಳನ್ನು ರಚಿಸಲಾಗುವುದು'' ಎಂದು ಹೇಳಿದರು.

''ಸಾಮಾನ್ಯವಾಗಿ ಆನೆಗಳು ಹಲಸಿನ ಹಣ್ಣು, ಕಬ್ಬು, ಕಾಫಿ ಬೀಜ ತಿನ್ನಲು ನಾಡಿಗೆ ಬರುತ್ತವೆ. ಇದನ್ನು ತಡೆಯಲು ಸೌರ ತಂತಿ ಬೇಲಿ ಮತ್ತು ಹ್ಯಾಂಗಿಂಗ್ ಸೌರಬೇಲಿ ಸದ್ಯದ ಪರಿಹಾರವಾಗಿದೆ. ಆನೆಗಳ ಹಾವಳಿ ಇರುವ ಪ್ರದೇಶದಲ್ಲಿ ಬೇಲಿ ಅಳವಡಿಸಲಾಗುವುದು. ಕಾವೇರಿ ವನ್ಯಜೀವಿ ತಾಣದ ಬಳಿ 132 ಕಿಲೋಮೀಟರ್ ಬ್ಯಾರಿಕೇಡ್ ಹಾಕುವ ಕಾರ್ಯ ನಡೆಯುತ್ತಿದೆ. ಈ ಪೈಕಿ 89 ಕಿಲೋಮೀಟರ್ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಯನ್ನು ಶೀಘ್ರವೇ ಮುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ'' ಎಂದರು.

ಬ್ಯಾರಿಕೇಡ್, ಸೌರಬೇಲಿ ಯೋಜನೆ:''ಹಾಸನ ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಬನ್ನೇರುಘಟ್ಟ ಪ್ರದೇಶಗಳಲ್ಲಿ ಆನೆಗಳ ಕಾಟವಿದೆ. ಇಲ್ಲಿ ಜೀವಹಾನಿ ಆಗದ ರೀತಿಯಲ್ಲಿ ಕ್ರಮವಹಿಸಲು ಅರಣ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯದ್ಯಂತ 641 ಕಿಲೋಮೀಟರ್ ಬ್ಯಾರಿಕೇಡ್ ಹಾಗೂ ಸೌರಬೇಲಿ ಹಾಕುವ ಯೋಜನೆಯಿದ್ದು, ಈ ಪೈಕಿ 360 ಕಿಲೋ ಮೀಟರ್ ಕಾರ್ಯ ಪೂರ್ಣಗೊಂಡಿದೆ. ರಾಜ್ಯದಲ್ಲಿ 629 ಆನೆಗಳಿದ್ದರೂ ಸಾವಿನ ಪ್ರಮಾಣ ಇತರ ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಇದೆ. ಮಾನವನ ಜೀವ ಅಮೂಲ್ಯವಾಗಿದ್ದು, ಜೀವ ಹಾನಿ ತಪ್ಪಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

51 ಜನರ ಸಾವು: ''2019-20ರ ಸಾಲಿನಲ್ಲಿ ವನ್ಯಮೃಗಗಳ ದಾಳಿಯಿಂದ ರಾಜ್ಯದಲ್ಲಿ 50 ಸಾವು ಸಂಭವಿಸಿದೆ. ಈ ಪೈಕಿ 29 ಸಾವು ಆನೆಗಳಿಂದಲೇ ಆಗಿದೆ. 20-21ರ ಅವಧಿಯಲ್ಲಿ 41 ಸಾವುಗಳು ಸಂಭವಿಸಿದ್ದರೆ, 2021-22 ರ ಅವಧಿಯಲ್ಲಿ 29 ಮತ್ತು 2022-23ರ ಅವಧಿಯಲ್ಲಿ 51 ಸಾವು ಸಂಭವಿಸಿದೆ, ಈ ಪೈಕಿ 29 ಆನೆ ದಾಳಿಯಿಂದ ಆಗಿದೆ. ಪ್ರಸ್ತುತ ಹಾಸನ ಚಿಕ್ಕಮಗಳೂರು ಕೊಡಗು ಮೈಸೂರು ಮತ್ತು ಚಾಮರಾಜನಗರದಲ್ಲಿ ಆನೆ ಕಾರ್ಯಪಡೆ ಕಾರ್ಯಾಚರಣೆ ಮಾಡುತ್ತಿದೆ. ರಾಮನಗರ ಮತ್ತು ಬನ್ನೇರುಘಟ್ಟದಲ್ಲಿ ಪ್ರತ್ಯೇಕ ಟಾಸ್ಕ್ ಫೋರ್ಸ್ ರಚಿಸಲಾಗುವುದು'' ಎಂದು ಭರವಸೆ ನೀಡಿದರು.

ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಪ್ರತಿ ಕಿ.ಮೀಗೆ ಒಂದುವರೆ ಕೋಟಿ ರೂಪಾಯಿ ವೆಚ್ಚವಾಗಲಿದೆ. ಆದರೆ ಹ್ಯಾಂಗಿಂಗ್ ಸೌರ ಬೇಲಿ ಮತ್ತು ಸೋಲಾರ್ ಬೇಲಿಗೆ ತಲಾ 6 ಲಕ್ಷ ರೂಪಾಯಿ ವೆಚ್ಚ ಆಗಲಿದೆ ಎಂದು ಸಚಿವ ಖಂಡ್ರೆ ಹೇಳಿದರು. ಸೌರ ಬೇಲಿಗಳ ಬದಲಿಗೆ ದಪ್ಪ ಕಲ್ಲಿನ ತಡಗೋಡೆಗಳನ್ನು ನಿರ್ಮಿಸಿದರೆ ಆನೆಗಳ ಹಾವಳಿ ತಪ್ಪಿಸಬಹುದು ಎಂಬ ಸಂಸದ ಸುರೇಶ್ ಅವರ ಸಲಹೆಗೆ ಪ್ರತಿಕ್ರಿಯಿಸಿದ ಸಚಿವರು, ರೈಲ್ವೆ ಬ್ಯಾರಿಕೇಡ್ ಮತ್ತು ಕಲ್ಲಿನ ತಡೆಗೋಡೆಗಳ ತುಲನಾತ್ಮಕ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಚಿರತೆಗಳ ಹಾವಳಿಯು ರಾಜ್ಯದ ಅನೇಕ ಕಡೆ ಅದರಲ್ಲೂ ರಾಮನಗರದಲ್ಲಿ ಹೆಚ್ಚಾಗಿದೆ. ಚಿರತೆಗಳನ್ನು ಹಿಡಿದು ಕಾಡಿಗೆ ಕಳುಹಿಸಲು ಕ್ರಮ ವಹಿಸುವಂತೆ ಸಚಿವರು ಸೂಚಿಸಿದರು. ಮಾನವನ ರಕ್ತದ ರುಚಿ ಕಂಡ ಚಿರತೆ ಮತ್ತು ಹುಲಿಗಳು ಪದೇ ಪದೇ ದಾಳಿ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಪುನರ್ವಸತಿ ಕೇಂದ್ರಗಳಲ್ಲಿ ಪೋಷಿಸುವ ಅಗತ್ಯವಿದೆ. ಈ ಕಾರ್ಯವನ್ನು ಇಲಾಖೆ ನಿರ್ವಹಿಸುತ್ತಿದೆ ಎಂದರು.

ಇದನ್ನೂ ಓದಿ :ರಾಮನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ: ಅರಣ್ಯ ಸಚಿವ ಈಶ್ವರ ಖಂಡ್ರೆ ಸಂತಾಪ

Last Updated : Jun 4, 2023, 7:54 PM IST

ABOUT THE AUTHOR

...view details