ರಾಯಚೂರು: ಐಆರ್‌ಸಿಟಿಸಿಯಲ್ಲಿ ಗುತ್ತಿಗೆ ಆಧಾರದ ಮೇಲೆ 5 ವರ್ಷದವರೆಗೆ ಕೆಲಸ ಕೊಡಿಸುವುದಾಗಿ ಹೇಳಿ ಜಾರ್ಖಂಡ್ ಮೂಲದವರಿಂದ ರಾಜ್ಯದ 35 ಜನರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.
ನಗರದ ಐಡಿಎಸ್‌ಎಂಟಿ ಲೇ ಔಟ್‌ನಲ್ಲಿರುವ ಸರ್ಕಾರ/ಬ್ಯಾಂಕಿಂಗ್ ಸರ್ಕಾರೇತರ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡುವಂತಹ ಕಂಪನಿ/ಎನ್‌ಜಿಒಗಳಿಗೆ ನಿರುದ್ಯೋಗ ಅಭ್ಯರ್ಥಿಗಳನ್ನು ಸೇರಿಸುವುದು ಅಥವಾ ಕೆಲಸ ಒದಗಿಸುವ ಮ್ಯಾನ್ ಪವರ್ ಮತ್ತು ಬಿಸಿನೆಸ್ ಸೊಲ್ಯೂಷನ್ಸ್ಸಂಸ್ಥೆಯೊಂದು ಮೋಸದ ಬಲೆಗೆ ಬಿದ್ದು ಸುಮಾರು 27 ಲಕ್ಷ ರೂಪಾಯಿ ಕಳೆದುಕೊಂಡಿದೆ.
ಈ ಸಂಸ್ಥೆಯ ಕೆಲಸಗಾರನೊಬ್ಬ ಆಗಸ್ಟ್ 22ರಂದು ಕೊಲ್ಕತ್ತಾದಲ್ಲಿ ಆರೋಪಿತರನ್ನು ಭೇಟಿ ಮಾಡಿದ್ದಾನೆ. ಈ ವೇಳೆ ಆರೋಪಿತರು, ನಮ್ಮ ಯುನಿವರ್ಸಲ್ ಪ್ರೈ.ಲಿ. ಕಂಪನಿಯು ಐಆರ್‌ಸಿಟಿಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. 5 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಸ್ಟೋರ್ ಕಿಪರ್, ಕಂಪ್ಯೂಟರ್ ಆಪರೇಟರ್, ಸೂಪರ್‌ವೈಜರ್, ಟೆಕ್ನಿಷಿಯನ್ ಹುದ್ದೆಗಳನ್ನು ಕರೆಯಲಾಗಿದೆ. ಯಾರಾದರೂ ಅಭ್ಯರ್ಥಿಗಳಿದ್ದರೆ ತಿಳಿಸಿ, ಅವರಿಗೆ ಕೆಲಸ ಕೊಡಿಸುತ್ತೇವೆ. ಮೊದಲಿಗೆ ಪ್ರತಿ ಅಭ್ಯರ್ಥಿಗೆ ಇಷ್ಟು ಹಣ ಖರ್ಚಾಗುತ್ತದೆ. ಅವರ ಬಯೋಡಟಾ ಮತ್ತು ಅಭ್ಯರ್ಥಿಗೆ ಇಂತಿಷ್ಟು ಹಣ ಕಳುಹಿಸುವಂತೆ ತಿಳಿಸಿದ್ದಾರೆ.