ಲಿಂಗಸುಗೂರು: ರಾಮ ಮಂದಿರ ಭಾರತೀಯ ಸಂಸ್ಕೃತಿಯ ಪ್ರತೀಕ. ಭವ್ಯ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣೆಗೆ ಮುಂದಾಗಿ ಎಂದು ಯರಡೋಣಿ ಮುರುಘರಾಜೇಂದ್ರ ಸ್ವಾಮೀಜಿ ಕರೆ ನೀಡಿದರು.
ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಅಮೆರಿಕ ನಾಶವಾದರೆ ಸಂಪತ್ತು ನಾಶವಾಗುತ್ತದೆ. ಜಪಾನ್ ನಾಶವಾದರೆ ತಂತ್ರಜ್ಞಾನ ನಾಶವಾಗುತ್ತದೆ. ಅಂತೆಯೇ ಭಾರತ ನಾಶವಾದರೆ ಸಂಸ್ಕೃತಿ ನಾಶವಾದಂತೆ ಎಂದು ಹೇಳಿದರು.
ರಾಮಾಯಣದಲ್ಲಿ ಸೇತುವೆ ನಿರ್ಮಾಣ ಮಾಡುವಾಗ ಅಳಿಲುಗಳು ಮರಳಲ್ಲಿ ಉರುಳಾಡಿ ಬಂದು ಸೇತುವೆ ಕಟ್ಟುವ ಕಾರ್ಯದಲ್ಲಿ ಭಕ್ತಿಯ ಸೇವೆ ಸಲ್ಲಿಸಿದ್ದವು. ಹಾಗೆಯೇ ನಾವೂ ಕೈಲಾದ ಮಟ್ಟಿಗೆ ನಿಧಿ ಸಮರ್ಪಿಸಿ ಮಂದಿರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ ರಾಮ ಮಂದಿರ ನಿರ್ಮಾಣಕ್ಕೆ ರೂ. 5 ಲಕ್ಷದ ಚೆಕ್ ನೀಡಿದರು. ಬಳಿಕ ಮಾತನಾಡಿ, ಆರ್ಎಸ್ಎಸ್, ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ನಿಧಿ ಸಂಗ್ರಹಿಸಬೇಕು. ರಾಮಚಂದ್ರ ಪ್ರಭುವಿನ ಸೇವೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.