ರಾಯಚೂರು:ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ಮೃತಪಟ್ಟ ಕುಟುಂಬಸ್ಥರನ್ನು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಭೇಟಿ ಮಾಡಿ, ಸಾಂತ್ವನ ಹೇಳಿದರು.
ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರ ಒತ್ತಾಯ ತಾಲೂಕಿನ ಕುರ್ವಕಲಾ ಗ್ರಾಮಕ್ಕೆ ಭೇಟಿ ನೀಡದ ಶಾಸಕ ದದ್ದಲ್, ಘಟನೆಯಲ್ಲಿ ಮೃತಪಟ್ಟ ಸುಮಲತಾ, ರೋಜಾ, ನರಸಮ್ಮ, ನರಸಮ್ಮ ಕುಟುಂಬಸ್ಥರಿಗೆ ವಿಪತ್ತು ನಿಧಿ ಅಡಿಯಲ್ಲಿ ಮೃತ ನಾಲ್ವರ ಪೈಕಿ, ಮೂವರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಿದರು. ಬಾಲಕಿ ರೋಜಾ ಕುಟುಂಬಕ್ಕೆ 5 ಲಕ್ಷ ರೂಪಾಯಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ನಡುಗಡ್ಡೆಯ ಗ್ರಾಮಗಳಲ್ಲಿ ಪ್ರತಿ ಬಾರಿ ಪ್ರವಾಹ ಬಂದಾಗ ಇಂತಹ ಅಹಿತಕರ ಘಟನೆಗಳು ನಡೆಯುತ್ತಿವೆ. ಇದನ್ನು ತಡೆಗಟ್ಟಲು ಜುರಲಾ ಯೋಜನೆ ಅಡಿಯಲ್ಲಿ ಮಂಜೂರಾಗಿ ನಡುಗಡ್ಡೆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಹಾಗೂ ಪ್ರವಾಹದಿಂದ ಬೆಳೆ ನಷ್ಟ ಹೊಂದಿದ ರೈತರಿಗೂ ಶೀಘ್ರ ಪರಿಹಾರ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಗ್ರಾಮಸ್ಥರು ಒತ್ತಾಯಿಸಿದರು.
ನಡುಗಡ್ಡೆಯಲ್ಲಿ ಸಾರ್ವಜನಿಕರು ನದಿ ಪ್ರವಾಹ ತಗ್ಗುವವರೆಗೆ ತೆಪ್ಪದ ಮೂಲಕ ನೀರಿಗೆ ಇಳಿಯದೇ ಸುರಕ್ಷಿತ ಸ್ಥಳದಲ್ಲಿ ಇರುವಂತೆ ಮನವಿ ಮಾಡಿದರು. ಯಾವುದೇ ಸಮಸ್ಯೆ ಉಂಟಾದಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಸಂಪರ್ಕಿಸುವಂತೆ ತಿಳಿಸಿದರು.