ರಾಯಚೂರು: "ಜೆಡಿಎಸ್ ಪಂಚರತ್ನ ಯಾತ್ರೆ ಪ್ರಚಾರದ ವೇಳೆ ಕಲ್ಲು ತೂರಾಟ ನಡೆಸಿ ವಾಹನ ಚಾಲಕನ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಜೆಡಿಎಸ್ ಕಾರ್ಯಕರ್ತನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ" ಎಂದು ಜೆಡಿಎಸ್ ಅಭ್ಯರ್ಥಿ ಕರಿಯಮ್ಮ ಆರೋಪಸಿದ್ದಾರೆ. ಜಿಲ್ಲೆಯ ದೇವದುರ್ಗ ತಾಲೂಕಿನ ದೇವತಗಲ್ ಗ್ರಾಮದಲ್ಲಿ ಈ ಘಟನೆ ಜರುಗಿದೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ನ ಮಹಿಳಾ ಅಭ್ಯರ್ಥಿ ಕರಿಯಮ್ಮ ಪರವಾಗಿ ದೇವದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಭಾನುವಾರ ಪಂಚರತ್ನ ಯೋಜನೆ ಪ್ರಚಾರ ವಾಹನ ದೇವತಗಲ್ ಗ್ರಾಮಕ್ಕೆ ತೆರಳಿದ್ದಾಗ ಆ ಗ್ರಾಮದ ಬಿಜೆಪಿ ಮುಖಂಡರು ಪ್ರಚಾರಕ್ಕೆ ಅಡ್ಡಿಪಡಿಸಿದ್ದಲ್ಲದೇ, ಅದೇ ಗ್ರಾಮದ ವಾಹನ ಚಾಲಕನ ಮೇಲೆ ಹಾಗೂ ಗ್ರಾಮದ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದಾರೆ. ಜೆಡಿಎಸ್ ಕಾರ್ಯಕರ್ತ ಶ್ರೀನಿವಾಸ ಎಂಬುವರ ತಲೆಗೆ ಪೆಟ್ಟು ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅವರು ದೂರಿದ್ದಾರೆ.
ಇದನ್ನೂ ಓದಿ:ಬಿಜೆಪಿ ನಾಯಕರು ರಾಜ್ಯಕ್ಕೆ ಬಂದು ಹೋಗುವುದು ಸೂಟ್ಕೇಸ್ ತೆಗೆದುಕೊಂಡು ಹೋಗೋದಕ್ಕಾ?: ಹೆಚ್ಡಿಕೆ ಪ್ರಶ್ನೆ
ಘಟನೆ ಕುರಿತು ಜೆಡಿಎಸ್ ಮುಖಂಡರು ಹಾಗೂ ಜೆಡಿಎಸ್ ಅಭ್ಯರ್ಥಿ ಕರಿಯಮ್ಮ ಜಾಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜೊತೆಗೆ, ದೇವದುರ್ಗದ ಹಾಲಿ ಶಾಸಕ ಕೆ.ಶಿವನಗೌಡ ಅವರ ಕುಮ್ಮಕ್ಕಿನಿಂದಲೇ ಹಲ್ಲೆ ನಡೆದಿದೆ. ಹೀಗಾಗಿ, ಅವರ ಮೇಲೂ ದೂರು ದಾಖಲಿಸಿಕೊಳ್ಳುವ ಮೂಲಕ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಕೆಲ ಹಳ್ಳಿಗಳಲ್ಲಿ ಜನರ ಬದುಕು ನೋಡಿ ಭಾರಿ ಬೇಸರವಾಯಿತು: ಹೆಚ್ ಡಿ ಕುಮಾರಸ್ವಾಮಿ