ರಾಯಚೂರು: ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯನ್ನು ಅನ್ ಲಾಕ್ ಮಾಡಿ, ಮಾರಾಟಕ್ಕೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ತರಕಾರಿ ಮಾರಾಟಗಾರರು ಒತ್ತಾಯಿಸಿದ್ದಾರೆ.
ಕಳೆದ ಐದು ತಿಂಗಳ ಹಿಂದೆ ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯನ್ನು ಜಿಲ್ಲಾಡಳಿತ ಬಂದ್ ಮಾಡಿತ್ತು. ನಗರದ ಪ್ರಮುಖ ರಸ್ತೆ ಸೇರಿದಂತೆ 18 ಸ್ಥಳಗಳಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ ಈ ಸ್ಥಳಗಳಲ್ಲಿ ಯಾವುದೇ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಿರಲಿಲ್ಲ.
ಮೂಲ ಸೌಕರ್ಯಗಳಿಂದ ವಂಚಿತರಾಗಿ ರಸ್ತೆ ಬದಿಯಲ್ಲಿ ಬಿಸಿಲು, ಮಳೆ ಎನ್ನದೇ ಜಿಲ್ಲಾಡಳಿತ ಸೂಚಿಸಿದ ಸ್ಥಳಗಳಲ್ಲಿ ತರಕಾರಿ ಮಾರಾಟ ಮಾಡುತ್ತಿರುವ ಮಾರಾಟಗಾರರು ಇನ್ನೂ ಎಷ್ಟು ದಿನ ರಸ್ತೆಯಲ್ಲಿ ಮಾರಾಟ ಮಾಡಬೇಕು ಎನ್ನುವ ಪ್ರಶ್ನೆಗೆ ಜಿಲ್ಲಾಡಳಿತ ಉತ್ತರಿಸಬೇಕಾಗಿದೆ. ಜಿಲ್ಲಾಡಳಿತ ಸೂಚಿಸಿದ ಸ್ಥಳಗಳಲ್ಲಿ ಒಂದಾದ ಮಹಿಳಾ ಸಮಾಜ ಮೈದಾನ ಸೇರಿದಂತೆ ಇತರೆ 18 ಸ್ಥಳಗಳಲ್ಲಿ ಮೂಲ ಸೌಕರ್ಯ ಒದಗಿಸಿ, ಇಲ್ಲವೆ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಪುನಾರಂಭಿಸಿ ಎಂಬುದು ತರಕಾರಿ ಮಾರಾಟಗಾರರ ಒತ್ತಾಯವಾಗಿದೆ.
ರಾಯಚೂರಿನ ಉಸ್ಮಾನಿಯಾ ಮಾರುಕಟ್ಟೆ ಪುನಾರಂಭಿಸಲು ಮಾರಾಟಗಾರರ ಒತ್ತಾಯ ರಾಯಚೂರು ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್. ಮಹಾವೀರ ಮಾತನಾಡಿ, ದೇಶದಲ್ಲಿ ಕೊರೊನಾ ಆರಂಭಿಕ ಸಮಯದಲ್ಲಿ ರೋಗ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಮಾರುಕಟ್ಟೆ ಬಂದ್ ಮಾಡಲಾಗಿತ್ತು. ನಗರದ ಮಹಿಳಾ ಸಮಾಜ ಮೈದಾನ ಸೇರಿದಂತೆ 18 ಕಡೆ ರಸ್ತೆಯ ಬದಿಯಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿ ಜಿಲ್ಲಾಡಳಿತ ಕೈ ತೊಳೆದುಕೊಂಡಿತು. ಈ ಸ್ಥಳಗಳಲ್ಲಿ ಯಾವುದೇ ಮೂಲ ಸೌಕರ್ಯಗಳನ್ನು ನೀಡದೆ ನಿರ್ಲಕ್ಷ್ಯ ವಹಿಸಿದ್ದು, ದೇಶವೇ ಅನ್ ಲಾಕ್ ಆಗಿ ತಿಂಗಳುಗಳು ಕಳೆದರೂ, ಇಲ್ಲಿಯವರೆಗೆ ತರಕಾರಿ ಮಾರುಕಟ್ಟೆ ಪುನಾರಂಭ ಕುರಿತು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಶೀಘ್ರವೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದರು.
ತರಕಾರಿ ಮಾರಾಟಗಾರ ಬಸವರಾಜ ಮಾತನಾಡಿ, ಕೊರೊನಾ ಹಿನ್ನೆಲೆ ಮಾರುಕಟ್ಟೆ ಬಂದ್ ಮಾಡಿ, ಇತರೆ ಸ್ಥಳಗಳಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿದರೂ, ಅಲ್ಲಿ ಯಾವುದೇ ಮೂಲ ಸೌಕರ್ಯ ಒದಗಿಸಿಲ್ಲ. ರಸ್ತೆ ಬದಿಯಲ್ಲಿ ತರಕಾರಿ ಮಾರಾಟಗಾರರು ಅಲ್ಲದವರು ಕೂಡ ಮಾರಾಟದಲ್ಲಿ ತೊಡಗಿರುವುದರಿಂದ ಮೂಲ ಮಾರಾಟಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೂ ಎಷ್ಟು ದಿನ ಬದಿಯಲ್ಲಿ ನಮ್ಮನ್ನು ನಿಲ್ಲಿಸುತ್ತೀರಿ, ತರಕಾರಿ ಮಾರುಕಟ್ಟೆ ಪುನಾರಂಭಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದರು.