ರಾಯಚೂರು: ನಗರದಲ್ಲಿ ಗಣೇಶ ನಿಮಜ್ಜನ ವೇಳೆ ಕರ್ತವ್ಯನಿರತ ಪೊಲೀಸ್ ಪೇದೆಗೆ ಅಡ್ಡಿಪಡಿಸಿದ್ದಲ್ಲದೇ, ದಾಂಧಲೆ ನಡಸಿದ ಆರೋಪಿಗಳ ವಿರುದ್ಧ ಸದರ್ ಬಜಾರ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಗಣೇಶ ನಿಮಜ್ಜನದ 5ನೇಯ ದಿನ (ಆ.26) ರಾತ್ರಿ ನಗರದಲ್ಲಿ ನಾನಾ ಕಡೆ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ನಿಮಜ್ಜನ ಮಾಡಲಾಗುತ್ತಿತ್ತು. ಈ ವೇಳೆ ಕೋವಿಡ್-19 ಹಿನ್ನೆಲೆಯಿಂದ ಕಡಿಮೆ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ತೊಡಗುವಂತೆ ಪೊಲೀಸರು ತಿಳಿ ಹೇಳಿದರು.
ಆದರೆ, ಜನರ ಗುಂಪು, ನೇತಾಜಿ ಠಾಣೆಯ ಕರ್ತವ್ಯನಿರತ ಪೊಲೀಸ್ ಪೇದೆ ಶಿವಣ್ಣ ಅವರನ್ನು ಅಡ್ಡಿಪಡಿಸಿದೆ. ಈ ಹಿನ್ನೆಲೆ ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 10ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಸಹ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಧ್ವನಿ ವರ್ಧಕ ವಿಚಾರವಾಗಿ ತಡರಾತ್ರಿ ಬಂಗಿಕೂಟದ ಬಳಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ, ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಬೈಕ್, ಬಂಡಿಗಳು, ಟಾಟಾ ಎಸಿ ವಾಹನ ಜಖಂಗೊಳಿಸಲಾಗಿದೆ.
ಮಹಿಳೆ ಮೇಲೆ ಹಲ್ಲೆ:ಬೈಕ್ ಮೇಲೆ ಮನೆಗೆ ತೆರಳುತ್ತಿದ್ದ ಬೈಕ್ ಸವಾರನ ಪತ್ನಿ ಮೇಲೆಯೂ ಹಲ್ಲೆ ನಡೆಸಲಾಗಿದೆ. ಪರಿಣಾಮ ಮಹಿಳೆ ಕೆಳಗಡೆ ಬಿದ್ದು ಗಾಯಗೊಂಡ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಗಲಾಟೆ ಹಿನ್ನೆಲೆ ಪೊಲೀಸರು ಗುಂಪು ಚದುರಿಸಲು ಲಘು ಲಾಠಿ ಬೀಸಿದರು.