ರಾಯಚೂರು:ಜಿಲ್ಲೆಯಲ್ಲಿ ಕೃಷ್ಣಾ, ತುಂಗಭದ್ರಾ ನದಿಗಳು ಹರಿಯುತ್ತಿರುವ ಪರಿಣಾಮ ಯಥೇಚ್ಚವಾಗಿ ಭತ್ತ ಬೆಳೆಯಲಾಗುತ್ತಿದ್ದು, 6 ಲಕ್ಷ ಮೆಟ್ರಿಕ್ ಟನ್ವರೆಗೆ ಭತ್ತ ಉತ್ಪಾದನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಜಿಲ್ಲೆ ಭತ್ತದ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.
ನಾರಾಯಣಪುರ ಬಲದಂಡೆ ಯೋಜನೆ (ಎನ್ಆರ್ಬಿಸಿ), ತುಂಗಭದ್ರಾ ನದಿ (ಟಿಎಲ್ಬಿಸಿ) ಯೋಜನೆಯಡಿ ರೈತರು ಹೊಲಗಳಿಗೆ ನೀರು ಪೂರೈಸಲಾಗುತ್ತಿದೆ. ಈ ನೀರನ್ನೇ ನಂಬಿಕೊಂಡು ಜಿಲ್ಲೆಯ ಸಿಂಧನೂರು, ಮಾನ್ವಿ, ದೇವದುರ್ಗ, ಸಿರವಾರ, ಮಸ್ಕಿ ತಾಲೂಕಿನಲ್ಲಿ ಯಥೇಚ್ಚವಾಗಿ ಭತ್ತ ಬೆಳೆಯಲಾಗುತ್ತಿದೆ. ಆದರೆ ಭತ್ತದ ಫಸಲನ್ನು ಸಂಗ್ರಹಿಸುವುದಕ್ಕಿಂತ ಮಾರಾಟ ಮಾಡುವವರ ಸಂಖ್ಯೆಯೇ ಹೆಚ್ಚಾಗಿದೆ.
ಕಳೆದ ವರ್ಷ 3,33,357 ಗುರಿ ಪೈಕಿ 2,59,082 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಶೇ. 77.72ರಷ್ಟು ಸಾಧನೆಯಾಗಿತ್ತು. ಪ್ರಸಕ್ತ ಸಾಲಿನಲ್ಲಿ 3.17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಿದ್ದು, ಅದರಲ್ಲಿ 49,754 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಇನ್ನೂ ಭತ್ತ ನಾಟಿ ಮುಂದುವರೆದಿದ್ದು, 6 ಲಕ್ಷ ಮೆಟ್ರಿಕ್ ಟನ್ ಭತ್ತ ಉತ್ಪಾದನೆ ಗುರಿ ಇದೆ ಎನ್ನಲಾಗಿದೆ.