ರಾಯಚೂರು:ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆಯ ಬಳಿಕ ಮತ ಎಣಿಕೆಗೆ ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 172 ಗ್ರಾಮ ಪಂಚಾಯಿತಿಗಳಿವೆ, ಒಟ್ಟು 9,97,890 ಮಂದಿ ಮತದಾರರಿದ್ದಾರೆ. ಎರಡು ಹಂತದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು ಶೇ.78.25ರಷ್ಟು ಮತದಾನವಾಗಿದೆ ಎಂದು ಮಾಹಿತಿ ನೀಡಿದರು.
ಚುನಾವಣೆಗಾಗಿ 1,599 ಮತಗಟ್ಟೆಗಳ ಪೈಕಿ, 1,487 ಮತಗಟ್ಟೆಗಳಲ್ಲಿ ಮತದಾನವಾಗಿದೆ. ಒಟ್ಟು 1,181 ಕ್ಷೇತ್ರಗಳಿದ್ದು, 417 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಳೆ ನಡೆಯುವ ಮತ ಎಣಿಕೆಗಾಗಿ 7 ತಾಲೂಕುಗಳಲ್ಲಿ 73 ಕೋಣೆಗಳು, 461 ಮೇಜುಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮತ ಎಣಿಕೆಗಾಗಿ 1,383 ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಹೆಚ್ಚುವರಿಯಾಗಿ 114 ಸಿಬ್ಬಂದಿ ನೇಮಿಸಲಾಗಿದೆ ಎಂದರು.