ರಾಯಚೂರು :ವಿಧಾನ ಪರಿಷತ್ ರಾಯಚೂರು ಹಾಗೂ ಕೊಪ್ಪಳ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಒಟ್ಟು 5 ಮಂದಿ ಅಭ್ಯರ್ಥಿಗಳು 12 ನಾಮಪತ್ರ ಸಲ್ಲಿಸಿದ್ದಾರೆ. ಇಂದು ನಾಮಪತ್ರ ಪರಿಶೀಲನೆ ನಡೆಸಲಾಯಿತು.
ಸಲ್ಲಿಕೆಯಾದ 12 ನಾಮಪತ್ರಗಳೂ ಕ್ರಮಬದ್ಧವಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಅವಿನಾಶ್ ರಾಜೇಂದ್ರ ಮೆನನ್ ಅವರು ತಿಳಿಸಿದರು.
ಸಲ್ಲಿಕೆಯಾಗಿದ್ದ ಒಟ್ಟು 12 ನಾಮಪತ್ರಗಳಲ್ಲಿ 5 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಅದರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಶರಣಗೌಡ ಪಾಟೀಲ್ ಬಯ್ಯಾಪೂರ 4 ನಾಮಪತ್ರ, ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ವಿಶ್ವನಾಥ ಬನಹಟ್ಟಿ 4 ನಾಮಪತ್ರ, ಜನಹಿತ ಪಾರ್ಟಿ ಅಭ್ಯರ್ಥಿ ತಿರುಪತಿ ತಂದೆ ನರಸಪ್ಪ ಅವರಿಂದ 2 ನಾಮಪತ್ರ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ದೊಡ್ಡ ಬಸನಗೌಡ ಪಾಟೀಲ್ 1 ನಾಮಪತ್ರ ಹಾಗೂ ನರೇಂದ್ರ ಆರ್ಯ ಅವರಿಂದ 1 ನಾಮಪತ್ರ ಸರಿಯಾಗಿದ್ದು, ಸ್ವೀಕೃತಗೊಂಡಿವೆ.
ನಾಮಪತ್ರ ಹಿಂಪಡೆಯಲು ನ.26 ಕೊನೆಯ ದಿನವಾಗಿದೆ. ಆ ದಿನ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ವಾಪಸ್ ಪಡೆಯಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.