ಲಿಂಗಸುಗೂರು:ಕಳೆದ ಹದಿನೈದು ದಿನಗಳಿಂದ ನಿರೀಕ್ಷಿತ ಮಳೆಗಿಂತ ಹೆಚ್ಚಿನ ಪ್ರಮಾಣದ ಮಳೆ ಬಂದಿದ್ದು, ತೋಟಗಾರಿಕೆ ಬೆಳೆಗಳಾದ ಈರುಳ್ಳಿ ಸೇರಿದಂತೆ ಇತರೆ ಬೆಳೆಗಳು ಹಾನಿಗೀಡಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅತಿಯಾದ ಮಳೆಗೆ ಈರುಳ್ಳಿ ಬೆಳೆ ಹಾನಿ: ಸಂಕಷ್ಟದಲ್ಲಿ ರೈತರು ಲಿಂಗಸುಗೂರು ತಾಲೂಕಿನ ಹಟ್ಟಿ, ಗುರುಗುಂಟ, ಮುದಗಲ್ಲ, ಮಾವಿನಭಾವಿ ಸುತ್ತಮುತ್ತಲಿನ ಪ್ರದೇಶಗಳ ನೀರಾವರಿ ಮತ್ತು ತೋಟಗಳಲ್ಲಿ ನಾಟಿ ಮಾಡಿಕೊಂಡಿದ್ದ ಈರುಳ್ಳಿ, ಸೌತೆ, ಈರೆ, ಬೆಂಡೆ, ಬದನೆ, ಹಾಗಲಕಾಯಿ ಸೇರಿದಂತೆ ಇತರೆ ತರಕಾರಿ ಬೆಳೆಗಳು ಕೊಳೆತು ದುರ್ನಾತ ಬೀರುತ್ತಿವೆ.
ಉತ್ತಮ ಫಸಲು ಬಂದು ಹೆಚ್ಚಿನ ಬೆಲೆ ನಿರೀಕ್ಷೆಯಲ್ಲಿದ್ದ ರೈತರಿಗೆ ಕಟಾವು ಹಂತದಲ್ಲಿದ್ದಾಗ ಬೆಳೆಗಳು ಕೈಕೊಟ್ಟಿದ್ದು, ಕಣ್ಣೀರಿಡುವ ದುಸ್ಥಿತಿ ಬಂದೊದಗಿದೆ. ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಹಾನಿಗೀಡಾಗಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಕಸಬಾ ಲಿಂಗಸುಗೂರು ಗ್ರಾಮದ ಹುಲಗಪ್ಪ ಮೆಲ್ಗೇರಿ ಮಾತನಾಡಿ, ತಮ್ಮ ಎರಡೂವರೆ ಎಕರೆ ಜಮೀನು ಪ್ರದೇಶದಲ್ಲಿ ಬೆಳೆದಿದ್ದ ಅಂದಾಜು ರೂ. 2,50,000 ಬೆಲೆಯ ಈರುಳ್ಳಿ, ಟೊಮ್ಯಾಟೊ ಸಂಪೂರ್ಣ ಹಾಳಾಗಿದೆ. ಅಧಿಕಾರಿಗಳು ತೋಟಕ್ಕೆ ಭೇಟಿ ನೀಡಿ ಅಗತ್ಯ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ತೋಟಗಾರಿಕೆ ಸಹಾಯಕ ನಿರ್ದೇಶಕ ಯೊಗೇಶ್ವರ ಮಾತನಾಡಿ, ಹೆಚ್ಚಿನ ಮಳೆ ಬಿದ್ದು ತೇವಾಂಶ ಹೆಚ್ಚಾಗಿದ್ದರಿಂದ ತೋಟಗಾರಿಕೆ ಬೆಳೆಗಳು ಹಾನಿಗೀಡಾದ ಮಾಹಿತಿ ಬಂದಿದೆ. ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.