ರಾಯಚೂರು:ಚಾಕು ತೋರಿಸಿ ವಯೋವೃದ್ಧೆಯ ಕಿವಿಯ ಓಲೆ, ಚಿನ್ನಾಭರಣ ಕಿತ್ತುಕೊಂಡು ಪರಾರಿಯಾದ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ನಡೆದಿದೆ. ಸಂಗಮ ಬಾರ್ ಹಿಂಭಾಗದ ಬಡಾವಣೆಯ ಮನೆಯೊಂದರಲ್ಲಿ ಗುರುವಾರ ಮಧ್ಯರಾತ್ರಿ ಮನೆಯ ಬಾಗಿಲು ಮುರಿದು ಪಾರ್ವತಮ್ಮ ಲಿಂಗಯ್ಯ ಗುಂತಗೋಳ ಎಂಬುವರ ಮನೆಯಲ್ಲಿ ಕೃತ್ಯ ಎಸಗಲಾಗಿದೆ.
ಮಧ್ಯರಾತ್ರಿ ಮನೆಯ ಬಾಗಿಲು ಮುರಿದು ಕಳ್ಳರು ನುಗ್ಗಿದ್ದಾರೆ. ಈ ಸಮಯದಲ್ಲಿ ಮನೆಯಲ್ಲಿ ಇದ್ದ ವಯೋವೃದ್ಧೆ ಕಳ್ಳರ ಕೃತ್ಯಕ್ಕೆ ಪ್ರತಿರೋಧ ತೋರಿದಾಗ ಖದೀಮರು ಬಾಯಿಯಲ್ಲಿ ಬಟ್ಟೆಯನ್ನು ಇಟ್ಟು, ಚಾಕು ತೋರಿಸಿ ಬೆದರಿಕೆ ಹಾಕಿ, ಆಕೆಯ ಕತ್ತಿನಲ್ಲಿದ್ದ ಬಂಗಾರದ ಸರ, ಕಿವಿಯಲ್ಲಿದ್ದ ಓಲೆಗಳನ್ನು ಕಿತ್ತುಕೊಂಡು ಖದೀಮರು ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ.
ಇತ್ತ ಕಿವಿಯಲ್ಲಿನ ಓಲೆಗಳನ್ನು ಕಿತ್ತುಕೊಂಡು ಇಬ್ಬರು ಯುವಕರು ಪರಾರಿಯಾಗುವ ವೇಳೆ ವೃದ್ಧೆ ಚೀರಾಡಿದ್ದಾರೆ. ಆಗ ಸುತ್ತಮುತ್ತಲಿನ ನಿವಾಸಿಗಳು ಬಂದು ಘಟನೆಯಿಂದ ಗಾಬರಿಗೊಂಡಿದ್ದಾರೆ. ಜೊತೆಗೆ ಕಿವಿಯಲ್ಲಿದ್ದ ಓಲೆಗಳು ಹರಿದಿರುವುದರಿಂದ ಕಿವಿಗೆ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಘಟನೆ ಸಂಬಂಧಿಸಿದಂತೆ ವಿಷಯ ತಿಳಿದ ಪೊಲೀಸರು ಮನೆಗೆ ಭೇಟಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಲಿಂಗಸೂಗೂರು ಪೊಲೀಸರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಘಟನೆಯ ಕುರಿತಂತೆ ಮಾಹಿತಿ ಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಇದೆ ಬಡಾವಣೆಯಲ್ಲಿ ಬಸವರಾಜ ಟೇಲರ್ ಎನ್ನುವರ ಮನೆ ಕಳ್ಳತನವಾಗಿತ್ತು. ಒಂದೇ ತಿಂಗಳಲ್ಲಿ 4-5 ಕಳ್ಳತನ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಉಂಟು ಮಾಡಿದ್ದು, ಕೂಡಲೇ ಪೊಲೀಸರು ಖದೀಮರನ್ನು ಸೆರೆ ಹಿಡಿಯುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹಿಂದಿನ ಪ್ರಕರಣ:ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾಜಿ ಸಂಸದರ ಮನೆಗೆ ಹಾಡಹಗಲೇ ಅಪರಿಚಿತ ವ್ಯಕ್ತಿಯೊಬ್ಬ ನೀರು ಕೇಳುವ ನೆಪದಲ್ಲಿ ಬಂದು ಬಂಗಾರದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದ ಆಘಾತಕಾರಿ ಘಟನೆ ಸೆಪ್ಟಂಬರ್ 9 ರಂದು ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ ಕದ್ದು ತಪ್ಪಿಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದರು. ಹಾನಗಲ್ ಮೂಲದ ಪರಶುರಾಮ ಸಣ್ಣಮನಿ ಬಂಧಿತ ಆರೋಪಿ. ಈತನಿಂದ ಪೊಲೀಸರು 1 ಲಕ್ಷದ 85 ಸಾವಿರ ಮೌಲ್ಯದ 37 ಗ್ರಾಂ ತೂಕದ ಬಂಗಾರದ ಸರ, ಕೃತ್ಯಕ್ಕೆ ಬಳಸಿದ 15 ಸಾವಿರ ರೂ. ಮೌಲ್ಯದ ಬೈಕ್ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಹಾಡಹಗಲೇ ಶಿರಸಿಯಲ್ಲಿ ಮಾಜಿ ಸಂಸದರ ಮನೆಗೆ ನುಗ್ಗಿ ಬಂಗಾರದ ಸರ ಕಳ್ಳತನ : ಪರಿಶೀಲನೆ