ರಾಯಚೂರು: ಪಾರ್ಟಿಯಲ್ಲಿ ಯಾರೂ ಕೂಡಾ ಲಕ್ಷ್ಮಣ ರೇಖೆ ದಾಟಬಾರದು. ಆ ರೇಖೆಯನ್ನು ದಾಟಿದರೆ ತೊಂದರೆಯಾಗುತ್ತದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಎಚ್ಚರಿಕೆ ನೀಡಿದರು. ರಾಯಚೂರಿನಲ್ಲಿಂದು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಮನೆಗೆ ಸಚಿವರಾದ ಡಾ.ಜಿ.ಪರಮೇಶ್ವರ ಹಾಗೂ ಸತೀಶ್ ಜಾರಕಿಹೋಳಿ ಭೇಟಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರವರು. ಪಕ್ಷದಲ್ಲಿ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಹೋಗಿ ಮಾತನಾಡಬೇಕಾಗುತ್ತದೆ. ಸಮಾಧಾನ ಮಾಡುವ ಕೆಲಸ ಮಾಡುತ್ತಾರೆ. ಹೈದರಾಬಾದ್ನಲ್ಲಿ ಪಕ್ಷದ ಸಭೆಯಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಅವರಿಗೂ ಆಹ್ವಾನವಿದೆ. ಇದೆಲ್ಲ ಸಣ್ಣ ವಿಷಯ. 135 ವರ್ಷಗಳ ಇತಿಹಾಸವಿರುವ ರಾಷ್ಟ್ರಮಟ್ಟದ ಪಕ್ಷದಲ್ಲಿ ಕೆಲವೊಮ್ಮೆ ಯಾರಿಗಾದರೂ ನೋವು ಆಗಿದ್ದರೆ, ಅದನ್ನು ಸರಿ ಮಾಡುವ ಕೆಲಸವನ್ನು ಹೈಕಮಾಂಡ್ ಮಾಡುತ್ತದೆ ಎಂದು ಹೇಳಿದರು.
ಸಚಿವ ಡಿ.ಸುಧಾಕರ್ ಭೂ ಹಗರಣ ಆರೋಪದ ವಿಚಾರಕ್ಕೆ, ಎಫ್‌ಐಆರ್ ಆಗಿದೆ. ತನಿಖೆಯೂ ನಡೆಯುತ್ತಿದೆ. ತನಿಖೆಯಲ್ಲಿ ಏನು ಬರುತ್ತದೋ ಅದರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆ ನಡೆದಿರುವ ಘಟನೆ. ಈಗ ಸಚಿವರಾಗಿರುವ ಕಾರಣಕ್ಕೆ ತೇಜೋವಧೆ ಮಾಡಲು ಆರೋಪ ಹೊರಿಸುತ್ತಿದ್ದಾರೆ. ಈಗ ಸರ್ಕಾರದಿಂದ ಉತ್ತಮ ಆಡಳಿತ ನಡೆಯುತ್ತಿದೆ. ಜನರ ಒಲವೂ ಸಹ ಕಾಂಗ್ರೆಸ್ ಪಕ್ಷದ ಮೇಲಿದೆ. ಸರ್ಕಾರದ ಮೇಲೆ ಯಾವುದೇ ಆರೋಪಗಳಿಲ್ಲ. ಈಗ ಆರೋಪಗಳಿಗಾಗಿ ಹುಡುಕುತ್ತಿದ್ದಾರೆ ಎಂದು ಟೀಕಿಸಿದರು.