ರಾಯಚೂರು: ಒಕ್ಕಲಿಗ ಸಮುದಾಯದ ಮೀಸಲು ಹೆಚ್ಚಳದ ಹೋರಾಟ ಈ ಮೊದಲಿನಿಂದಲೂ ಇದೆ. ಬಾಲಗಂಗಾಧರನಾಥ ಸ್ವಾಮೀಜಿ ಇದ್ದ ಸಂದರ್ಭದಲ್ಲೂ ಮೀಸಲಾತಿ ಹೆಚ್ಚಿಸಬೇಕು ಎನ್ನುವ ಒತ್ತಡವಿತ್ತು. ಈಗ ಸರ್ಕಾರ ಮೀಸಲಾತಿ ಪರಿಷ್ಕರಣೆ ಪ್ರಕ್ರಿಯೆ ನಡೆಸಿರುವುದರಿಂದ ಧ್ವನಿ ಎತ್ತಲಾಗಿದೆ ಎಂದು ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮಿ ಈ ಬಗ್ಗೆ ಎತ್ತಿರುವ ಪ್ರಶ್ನೆ ಸೂಕ್ತವಾಗಿದೆ. ಇದಕ್ಕೆ ನಮ್ಮ ಬೆಂಬಲವಿದೆ. ಮೀಸಲಾತಿ ಹೆಚ್ಚಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಮೀಸಲಾತಿ ಹೆಚ್ಚಳದಿಂದ ವಿದ್ಯಾರ್ಥಿಗಳಿಗೆ, ರೈತಾಪಿ ಜನರಿಗೆ ಅನುಕೂಲವಾಗುತ್ತದೆ. ವಿದ್ಯಾಭ್ಯಾಸ, ಉದ್ಯೋಗದಲ್ಲಿ ಅನುಕೂಲವಾಗುತ್ತದೆ. ಬೇರೆ ಸಮುದಾಯವರಿಗೆ ಹೇಗೆ ಮೀಸಲಾತಿ ಹೆಚ್ಚಿಸಲಾಗಿದೆ ಹಾಗೇ ನಮಗೂ ಹೆಚ್ಚಿಸಿ. ಕಾನೂನು ನಮಗೂ ಗೊತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಗೊಂದಲ ಸೃಷ್ಟಿಸುತ್ತಿವೆ. ಹೀಗಾಗಿ ನಾವು ಮೀಸಲಾತಿ ಸೌಲಭ್ಯ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಒಕ್ಕಲಿಗ ಸಮುದಾಯಕ್ಕೆ ಶೇ 8ರಷ್ಟು ಮೀಸಲಾತಿ ಹೆಚ್ಚಳಕ್ಕೆ ನಿರ್ಮಲಾನಂದ ಸ್ವಾಮೀಜಿ ಆಗ್ರಹ
2ಎ ನಲ್ಲೇ ಸೇರಿಸಬೇಕು ಅನ್ನೋದು ನಮ್ಮ ಒತ್ತಾಯ. ಮೀಸಲಾತಿ ಶೇ 12ಕ್ಕೆ ಏರಿಕೆ ಮಾಡಬೇಕು ಅನ್ನೋದು ನಮ್ಮ ಹಳೆಯ ಬೇಡಿಕೆ. ಚುನಾವಣಾ ದೃಷ್ಟಿಯಿಂದ ಮತ ಓಲೈಸಲು ಕೆಲ ಪಕ್ಷಗಳು ಮೀಸಲಾತಿ ಹೆಚ್ಚಿಸುತ್ತಿವೆ. ಹೀಗಾಗಿ ನಮ್ಮ ಸಮುದಾಯದವರು ಪಕ್ಷಭೇದ ಮರೆತು ಮೀಸಲಾತಿಗಾಗಿ ಹೋರಾಟ ಮಾಡುತ್ತೇವೆ ಎಂದು ಸಂಸದರು ಎಚ್ಚರಿಕೆ ನೀಡಿದರು.