ಲಿಂಗಸುಗೂರು:ರಾಯಚೂರು-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಲಿಂಗಸುಗೂರು ತಾಲೂಕಿನ ಕುಪ್ಪಿಗುಡ್ಡ ಬಳಿಯ ಸೇತುವೆ ಕುಸಿತಗೊಂಡಿದ್ದು, ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಲಿಂಗಸುಗೂರು ತಾಲೂಕು ಕೇಂದ್ರದಿಂದ 3 ಕಿ.ಮೀ. ಅಂತರದಲ್ಲಿರುವ ಹಳೇ ಸೇತುವೆ ಕೆಳ ಭಾಗದ ಕಲ್ಲಿನ ಗೋಡೆ (ಪಿಲ್ಲರ್) ಭಾಗಶಃ ಕುಸಿತಗೊಂಡಿದೆ. ಸೇತುವೆ ಮೇಲ್ಭಾಗ, ಉತ್ತರ ದಿಕ್ಕಿನ ಸೇತುವೆ ರಕ್ಷಣೆ ಗೋಡೆ ಕೂಡ ಕುಸಿತಗೊಂಡಿದ್ದು, ಅಪಾಯದ ಮುನ್ಸೂಚನೆ ನೀಡಿದೆ. ರಾಯಚೂರು-ಬೆಳಗಾವಿ ರಸ್ತೆ ಹೈದರಾಬಾದ್, ಕರ್ನೂಲ್, ಶ್ರೀಶೈಲ, ಗೋವಾ, ಮಹಾರಾಷ್ಟ್ರ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ. ನಿತ್ಯ 700ರಿಂದ 750 ವಾಹನಗಳ ತಿರುಗಾಟ ಸಾಮಾನ್ಯ. ಮುನ್ನೆಚ್ಚರಿಕೆ ವಹಿಸಿ ಶಾಶ್ವತ ದುರಸ್ತಿಗೆ ಮುಂದಾಗದಿದ್ದಲ್ಲಿ ಅನಾಹುತಗಳ ಜೊತೆಗೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಗಳಿವೆ.