ರಾಯಚೂರು: ಟ್ರಾನ್ಸ್‌ಫಾರ್ಮರ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶದಿಂದ ಲೈನ್‌ಮ್ಯಾನ್ ಸಾವಿಗೆ ಕಾರಣವಾದ ಜೆಇಯನ್ನ ಅಮಾನತುಗೊಳಿಸುವಂತೆ ರಾಯಚೂರಿನಲ್ಲಿ ಲೈನ್‌ಮ್ಯಾನ್ ಕುಟುಂಬಸ್ಥರು ಮತ್ತು ಹಿತೈಷಿಗಳು ಪ್ರತಿಭಟನೆ ನಡೆಸಿದ್ರು.
ಜಿಲ್ಲಾಧಿಕಾರಿ ಮನೆ ಮುಂದೆ ಶವವಿಟ್ಟು ಪ್ರತಿಭಟನೆ - ವಿದ್ಯುತ್
ಟ್ರಾನ್ಸ್‌ಫಾರ್ಮರ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶದಿಂದ ಲೈನ್‌ಮ್ಯಾನ್ ಸಾವಿಗೆ ಕಾರಣವಾದ ಜೆಇಯನ್ನ ಅಮಾನತುಗೊಳಿಸುವಂತೆ ರಾಯಚೂರಿನಲ್ಲಿ ಲೈನ್‌ಮ್ಯಾನ್ ಕುಟುಂಬಸ್ಥರು ಮತ್ತು ಹಿತೈಷಿಗಳು ಪ್ರತಿಭಟನೆ ನಡೆಸಿದ್ರು.
ನಗರದ ಜಿಲ್ಲಾಧಿಕಾರಿ ಮನೆಯ ಮುಂಭಾಗದಲ್ಲಿ ಲೈನ್‌ಮ್ಯಾನ್ ಶವವಿಟ್ಟು ಪ್ರತಿಭಟನೆ ನಡೆಸಿದ್ರು. ರಾಯಚೂರು ತಾಲೂಕಿನ ಮರ್ಚೆಂಟ್‌ಹಾಳ್ ಗ್ರಾಮದ ಬಳಿ ಟ್ರಾನ್ಸ್‌ಫಾರ್ಮರ್ ಆಳವಡಿಕೆ ಕರ್ತವ್ಯಕ್ಕೆ ಇಮ್ರಾನ್, ರವಿ, ವೆಂಕಟೇಶ್ ತೆರಳಿದ್ರು. ಟ್ರಾನ್ಸ್‌ಫಾರ್ಮರ್ ಆಳವಡಿಕೆ ಕಾರ್ಯವೆಲ್ಲ ಮುಗಿದ ಬಳಿಕ ಎಲ್‌ಸಿ(ಲೈನ್ ಕ್ಲಿಯರ್) ಆದ ಬಳಿಕ ವಿದ್ಯುತ್ ಸರಬರಾಜು ಮಾಡಬೇಕು. ಆದ್ರೆ ರಾಯಚೂರು ಗ್ರಾಮೀಣ ಜೆಸ್ಕಾಂ ಮಟಮಾರಿ ಶಾಖಾ ವಿಭಾಗದ ಪ್ರಭಾರಿ ಜೆಇ ಡಿ.ಅಮರೇಶ್ ಅವರ ನಿರ್ಲಕ್ಷ್ಯದ ಪರಿಣಾಮ ಎಲ್‌ಸಿ ಪಡೆಯದೆ ವಿದ್ಯುತ್ ಸರಬರಾಜು ಮಾಡಲಾಗಿದೆ ಎಂದು ಆರೋಪಿಸಿದರು.
ಈ ವೇಳೆ ಟ್ರಾನ್ಸ್‌ಫಾರ್ಮರ್ ಆಳವಡಿಕೆ ಕಾರ್ಯದಲ್ಲಿ ತೊಡಗಿದ್ದ ವೆಂಕಟೇಶ್, ರವಿ ಗಂಭಿರ ಗಾಯಗೊಂಡಿದ್ದಾರೆ. ಇಮ್ರಾನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳದಲ್ಲೇ ಮೃತಪಟ್ಟ ಇಮ್ರಾನ್ ಮರಣೋತ್ತರ ಪರೀಕ್ಷೆಗೆ ರಿಮ್ಸ್‌ಗೆ ರವಾನೆ ಮಾಡಲಾಗಿದೆ. ಮೃತನ ಕುಟುಂಬಸ್ಥರು ಘಟನೆಗೆ ಕಾರಣವಾದ ಜೆಇಯನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದ್ರು. ಆದ್ರೆ ಜೆಇಯನ್ನ ಅಮಾನತುಗೊಳಿಸಿರಲಿಲ್ಲ. ಹೀಗಾಗಿ ನಿರ್ಲಕ್ಷ್ಯ ತೊರಿದ ಪ್ರಭಾರಿ ಜೆಇ ಡಿ.ಅಮರೇಶ್ ಅಮಾನತಿಗೆ ಆಗ್ರಹಿಸಿ ಏಕಾಏಕಿ ಜಿಲ್ಲಾಧಿಕಾರಿ ಮನೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಮನೆ ಮುಂದೆ ಮೃತದೇಹವನ್ನವಿಟ್ಟು ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.