ರಾಯಚೂರು:ತೆಲಂಗಾಣಕ್ಕೆ ರಾಯಚೂರು ಜಿಲ್ಲೆಯನ್ನು ಸೇರಿಸಬೇಕೆಂದು ಜನ ಒತ್ತಾಯಿಸುತ್ತಿದ್ದಾರೆ ಎಂಬ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಹೇಳಿಕೆಯು ಹಾಸ್ಯಾಸ್ಪದ ಮತ್ತು ಇದೊಂದು ರಾಜಕೀಯ ಪ್ರೇರಿತ ಹೇಳಿಕೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದು ಆಯೋಜಿಸಿರುವ ಸಿರಿಧಾನ್ಯ ಮೇಳಕ್ಕೆ ಆಗಮಿಸಿರುವ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ರಾಯಚೂರು ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಕೆಕೆಆರ್ಡಿಬಿಗೂ ಸಾಕಷ್ಟು ಅನುದಾನ ನೀಡುತ್ತಿದ್ದೇವೆ. ಪ್ರತ್ಯೇಕವಾದ ರಚನೆಯಾದ ನಂತರವೂ ತೆಲಂಗಾಣ ಇನ್ನೂ ಹಿಂದುಳಿದ ಪ್ರದೇಶವಾಗಿದೆ. ತೆಲಂಗಾಣದ ಸಮಸ್ಯೆಗಳ ಬಗೆಗಿನ ಗಮನ ಬೇರೆಡೆ ಸೆಳೆಯಲು ಕೆ ಚಂದ್ರಶೇಖರ್ ರಾವ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ನಮ್ಮ ಒಂದಿಂಚು ಜಾಗವನ್ನು ನಾವು ಬಿಟ್ಟುಕೊಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ರಾಯಚೂರು ಬಗ್ಗೆ ತೆಲಂಗಾಣ ಸಿಎಂ ಹೇಳಿಕೆ: ಬಿಜೆಪಿ ಸರ್ಕಾರದ ಮೌನ ಪ್ರಶ್ನಿಸಿದ ಕಾಂಗ್ರೆಸ್
ಆರೋಗ್ಯ ಸಚಿವರೊಂದಿಗೆ ಚರ್ಚೆ: ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಕಳೆದ ಬಾರಿ ದೆಹಲಿಗೆ ಹೋದಾಗ ಕೇಂದ್ರ ಆರೋಗ್ಯ ಸಚಿವರೊಂದಿಗೆ ಏಮ್ಸ್ ಸ್ಥಾಪನೆ ಬಗ್ಗೆ ಮಾತನಾಡಿದ್ದೇನೆ. 371 (ಜೆ) ಜಾರಿ ಇರುವ ಭಾಗ, ಕೇಂದ್ರದ ಮಹತ್ವಾಕಾಂಕ್ಷೆ ಜಿಲ್ಲೆ ಹಾಗೂ ಅಪೌಷ್ಟಿಕತೆ ಹೆಚ್ಚಿರುವ ಜಿಲ್ಲೆಯಾಗಿದ್ದು, ಉತ್ತಮ ಆರೋಗ್ಯ ಸಂಸ್ಥೆ ಬೇಕೆಂದು ಕೇಳಿದ್ದೇನೆ. ಅತೀ ಶೀಘ್ರದಲ್ಲಿ ಒಂದು ನಿರ್ಣಯ ಮಾಡುತ್ತೇವೆ ಎಂದು ತಿಳಿಸಿದರು.
ವಿಮಾನ ನಿಲ್ದಾಣಕ್ಕೆ ಅಡಿಗಲ್ಲು:ಇದೇ ವೇಳೆ ಮುಂದಿನ ತಿಂಗಳ ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಹಾಕಲಾಗುತ್ತದೆ. ಇದೇ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಮುಂದಿನ ದಿನಗಳಲ್ಲಿ ಚಾಲನೆಯನ್ನು ಕೊಡಲಾಗುತ್ತದೆ. ಸಿರಿಧಾನ್ಯ ಬೆಳೆಯಲು ಸರ್ಕಾರ ಎಲ್ಲ ರೀತಿಯ ಉತ್ತೇಜನ ನೀಡಲಿದೆ. ಆರ್ಥಿಕ ಸಹಾಯ ನೀಡುವುದು ಸೇರಿದಂತೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಹೇಳಿದರು.