ರಾಯಚೂರು: ದೈವಲೀಲೆಯ ಖ್ಯಾತಿಯ ಕಾಂತಾರ ಮೂವಿಯ ತರಹ ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರದ ಹೆಂಬರಾಳ ಗ್ರಾಮದ ಬೀರಲಿಂಗೇಶ್ವರ ಜಾತ್ರೆಯಲ್ಲಿ ಪೂಜಾರಿ ನೀಡಿದ ದೈವ ಹೇಳಿಕೆಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಭಾರೀ ವೈರಲ್ ಆಗಿದೆ. ಮಕರ ಸಂಕ್ರಾಂತಿ ಹಬ್ಬದಂದು ಹೆಂಬರಾಳ ಗ್ರಾಮದಲ್ಲಿ ನಡೆಯುವ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಪೂಜಾರಿ ಮೈಮೇಲೆ ದೇವರು ಬಂದು ನುಡಿದ ದೈವದ ಹೇಳಿಕೆ, ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ದೈವದ ಹೇಳಿಕೆಯಲ್ಲಿ ಹಾಲಿ ಶಾಸಕ ಬಸವನಗೌಡ ದದ್ದಲ್ ಮತ್ತೊಮ್ಮೆ ಗೆದ್ದು ಬರುತ್ತಾರೆ ಎಂಬುವುದನ್ನೂ ಗ್ರಾಮಸ್ಥರು ಚಿತ್ರೀಕರಿಸಿ, ಸೋಷಿಯಲ್ ಮೀಡಿಯಾಗೆ ಬಿಟ್ಟಿದ್ದು, ವಿಡಿಯೋ ಎಲ್ಲೆಡೆ ಚರ್ಚೆ ಆಗುತ್ತಿದೆ.
ಚುನಾವಣೆ ಮೇಲೆ ದೈವಲೀಲೆಗಳು: ರಾಜ್ಯದಲ್ಲಿ ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರಲಿದ್ದು, ರಾಜಕೀಯ ಪಕ್ಷಗಳಲ್ಲಿ ವಿವಿಧ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಕ್ಷೇತ್ರದಲ್ಲಿ ಸ್ಪರ್ಧೆ ಭಯಸುವ ಅಭ್ಯರ್ಥಿಗಳು ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ, ಒಡನಾಟ ಬೆಳೆಸುವುದು, ಕಾರ್ಯಕರ್ತರ ಮನೆಯಲ್ಲಿ ವಿವಿಧ ಕಾರ್ಯಕ್ರಮ, ಮದುವೆ ಸಮಾರಂಭ, ನಾನಾ ದೇವರ ಜಾತ್ರೆಗಳಲ್ಲಿ ಭಾಗವಹಿಸುವುದು ಪೈಪೋಟಿಗೆ ಬಿದ್ದಂತೆ ತಿರುಗುತ್ತಾರೆ.
ಎಲ್ಲ ಪಕ್ಷದ ಚುನಾವಣೆ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಸುತ್ತುತ್ತೂ ಸೋಲು ಗೆಲುವಿನ ಲೆಕ್ಕಚಾರ ಹಾಕುತ್ತಿರುತ್ತಾರೆ. ಇದರ ನಡುವೆ ಅಭ್ಯರ್ಥಿಗಳು ದೇವರ ಮೊರೆ ಹೋಗುವುದು, ಪೂಜೆ ಪುನಸ್ಕಾರ ನಡೆಸುವುದು, ಹರಕೆ ಹೊತ್ತುಕೊಳ್ಳುವುದು, ದೈವದ ಹೇಳಿಕೆಗಳನ್ನು ಕೇಳುವುದನ್ನು ಕೆಲವರು ಮಾಡುತ್ತಿರುತ್ತಾರೆ. ಹಲವಾರು ವರ್ಷಗಳಿಂದ ಹೆಂಬರಾಳ ಗ್ರಾಮದ ಬೀರಲಿಂಗೇಶ್ವರ ಜಾತ್ರೆಯೂ ಆಚರಿಸಿಕೊಂಡು ಬರುತ್ತಿದ್ದು, ಗ್ರಾಮದ ಸುತ್ತಲಿನ ಗ್ರಾಮಗಳಲ್ಲಿ ಬಹಳಷ್ಟು ಪ್ರಸಿದ್ಧ ಪಡೆದಿದೆ.ಮಕರ ಸಂಕ್ರಾಂತಿ ಹಬ್ಬದಂದು ರಾಯಚೂರು ತಾಲೂಕಿನ ಹೆಂಬರಾಳ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ನೇರವೇರುತ್ತದೆ. ಈ ಬಾರಿಯೂ ಬೆಳಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿ ನಾನಾ ಪೂಜಾ ಕಾರ್ಯಕ್ರಮಗಳು ಜರಗಿದವು.
ನಂತರ ದೇವರ ಮೂರ್ತಿಯನ್ನು ಪಲ್ಲಕ್ಕಿ ಉತ್ಸವದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಆದರೆ, ಜಾತ್ರೆ ಸಂದರ್ಭದಲ್ಲಿ ದೇವರ ಪಲ್ಲಕ್ಕಿ ಉತ್ಸವದ ವೇಳೆ ಬೀರಲಿಂಗೇಶ್ವರ ದೇವರು ಪೂಜಾರಿ ಮೈಮೇಲೆ ದೇವರು ಬರುವುದು ವಾಡಿಕೆ. ಇಂತಹ ಸಂದರ್ಭದಲ್ಲಿ ಅವರು ನೀಡುವ ಹೇಳಿಕೆಗಳು ದೈವದ ಹೇಳಿಕೆಗಳಾಗಿವೆ ಎಂಬ ನಂಬಿಕೆ ಜನರಲ್ಲಿದೆ.