ರಾಯಚೂರು: ವರದಕ್ಷಿಣೆ ತರುವಂತೆ ಕಿರುಕುಳ ನೀಡಿ, ಬಳಿಕ ಗಂಡನ ಮನೆಯವರು ಚೈತ್ರಾ ಎಂಬ ಯುವತಿಯನ್ನು ನೇಣುಹಾಕಿ ಕೊಂದಿರುವ ಆರೋಪ ಕೇಳಿಬಂದಿದೆ. ಈ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಸಬಾಲಿಂಗಸುಗೂರು ಗ್ರಾಮದಲ್ಲಿ ನಡೆದಿದೆ.
ಚೈತ್ರಾ ಭೂಪುರಗೆ (19) ಮೃತ ಯುವತಿ. 2021ರ ಜುಲೈ ತಿಂಗಳಿನಲ್ಲಿ ತಾಲೂಕಿನ ಜೂಲಗುಡ್ಡ ಗ್ರಾಮದ ಚೈತ್ರಾಳನ್ನು ಕಸಬಾಲಿಂಗಸುಗೂರು ಗ್ರಾಮದ ಕುಪ್ಪಣ್ಣ ಎಂಬುವವರ ಜೊತೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯ ಸಮಯದಲ್ಲಿ ಬಂಗಾರ, ವಾಚ್, ಬಟ್ಟೆ ಜೊತೆಗೆ ವರದಕ್ಷಿಣೆ ಸಹ ನೀಡಲಾಗಿತ್ತು. ಕೆಲ ತಿಂಗಳ ನಂತರ ಕಾರು ಖರೀದಿಗೆ ತವರು ಮನೆಯಿಂದ ವರದಕ್ಷಿಣೆ ರೂಪದಲ್ಲಿ ಹಣ ತರುವಂತೆ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು ಎನ್ನಲಾಗ್ತಿದೆ.