ಲಿಂಗಸುಗೂರು(ರಾಯಚೂರು): ಜಿಲ್ಲೆಯ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಗೆ ಸೋಮವಾರ ಚಿಕಿತ್ಸೆಗೆಂದು ಬಂದಿದ್ದ ಗರ್ಭಿಣಿ ಸಂಜೆ ವೇಳೆ ಕುಟುಂಬಸ್ಥರ ಸಮೇತ ತಲೆಮರೆಸಿಕೊಂಡು ಮಂಗಳವಾರ ಬೆಳಗ್ಗೆ ಗಂಡು ಮಗುವಿನೊಂದಿಗೆ ಪ್ರತ್ಯಕ್ಷವಾದ ಘಟನೆ ನಡೆದಿದೆ.
ಸಾರ್ವಜನಿಕ ಆಸ್ಪತ್ರೆಯಿಂದ ತಲೆಮರೆಸಿಕೊಂಡಿದ್ದ ಗರ್ಭಿಣಿ: ಮರುದಿನ ಮಗುವಿನೊಂದಿಗೆ ಪ್ರತ್ಯಕ್ಷ!
ಸಾಂಸ್ಥಿಕ ಕ್ವಾರಂಟೈನ್ನಿಂದ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದ ಗರ್ಭಿಣಿ ಮತ್ತು ಪತಿ ರಾತ್ರಿ ವೈದ್ಯರ ಜತೆ ಗಲಾಟೆ ಮಾಡಿಕೊಂಡು ಆಸ್ಪತ್ರೆಯಿಂದ ಪರಾರಿಯಾಗಿದ್ದರು.
ತಾಲೂಕಿನ ಹಾಲಭಾವಿ ತಾಂಡಾದ ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳು ಮಹಾರಾಷ್ಟ್ರದಿಂದ ವಾಪಸಾಗಿ ಅಡವಿಭಾವಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಸಾಂಸ್ಥಿಕ ಕ್ವಾರಂಟೈನ್ನಿಂದ ಚಿಕಿತ್ಸೆಗೆಂದು ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದರು. ಆದರೆ ಕೊರೊನಾ ಭೀತಿಯಿಂದ ಹೆರಿಗೆ ಮಾಡಿಸಲು ವೈದ್ಯರು ಹಿಂದೇಟು ಹಾಕಿದ್ದರು. ಹೀಗಾಗಿ ವೈದ್ಯರು ಆ್ಯಂಬ್ಯುಲೆನ್ಸ್ ಮೂಲಕ ರಾಯಚೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲು ಸಿದ್ಧತೆ ಮಾಡಿಕೊಂಡಿದ್ದರು. ಈ ವಿಚಾರ ತಿಳಿದ ಪತಿ ಗಲಾಟೆ ಮಾಡಿದ್ದಾನೆ. ಬಳಿಕ ರಾತ್ರೋರಾತ್ರಿ ಈ ಕುಟುಂಬ ಲಿಂಗಸುಗೂರು ಆಸ್ಪತ್ರೆಯಿಂದ ಪರಾರಿಯಾಗಿತ್ತು.
ರಾತ್ರಿ ಪೊಲೀಸ್, ಆರೋಗ್ಯ ಇಲಾಖೆಯ ಕಣ್ತಪ್ಪಿಸಿ ಹೋಗಿದ್ದ ಗರ್ಭಿಣಿ ಸುಣಕಲ್ಲ ಹೊರವಲಯದ ಜಮೀನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ರುದ್ರಗೌಡ ಪಾಟೀಲ್ ನೇತೃತ್ವದ ತಂಡ ರೋಡಲಬಂಡ ಪ್ರಾಥಮಿಕ ಕೇಂದ್ರಕ್ಕೆ ಬಾಣಂತಿ, ಮಗು ಸಮೇತ ಕುಟುಂಬಸ್ಥರನ್ನು ಸ್ಥಳಾಂತರಿಸಿ ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ.