ರಾಯಚೂರು: ಕೊರೊನಾ ಕಾರಣ ಹೆಚ್ಚಿನವರು ಮನೆಯಿಂದಲೇ ಕಾರ್ಯ ನಿರ್ವಹಿಸುವಂತಾಗಿದೆ. ಅದೆಷ್ಟೋ ಮಂದಿ ತಮ್ಮೂರು ಸೇರಿದ್ದಾರೆ. ಈ ಸಮಯದಲ್ಲಿ ಹೋಳಿ ಹಬ್ಬದ ಆಚರಣೆ ಕೇವಲ ಮನೆಗೆ ಸೀಮಿತಗೊಳಿಸದೆ ತಮ್ಮ ಜೀವನಕ್ಕೆ ಬಣ್ಣ ನೀಡಿದ ಶಾಲೆಗೆ ಬಣ್ಣ ಹಚ್ಚುವ ಮೂಲಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಹೋಳಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಿದರು.
ನಗರದ ಬಹಳ ಹಳೆಯ ಶಾಲೆಯಂದೇ ಕರೆಸಿಕೊಳ್ಳುವ ಜವಾಹರನಗರ ಶಾಲೆ ಐದು ದಶಕಗಳಷ್ಟು ಹಳೆಯದಾಗಿದೆ. ಅಂದಿನ ಸಮಯದಲ್ಲಿ ಈ ಶಾಲೆಯಲ್ಲಿ ಪ್ರವೇಶ ಪಡೆಯುವುದೇ ಪ್ರತಿಷ್ಠೆಯಾಗಿತ್ತು. ಕನ್ನಡ ಹಾಗೂ ಆಂಗ್ಲ ಮಾಧ್ಯಮ, ಪ್ರಾಥಮಿಕ ಹಾಗೂ ಪೌಢ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡಿ ಇಂದು ದೇಶ ವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೋವಿಡ್ ಎರಡನೇ ಅಲೆ ಎಫೆಕ್ಟ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಹುತೇಕ ಖಾಸಗಿ ಕಂಪನಿಗಳು ವರ್ಕ್ ಫ್ರಂ ಹೋಮ್ ಮೂಲಕ ಕಾರ್ಯಾಚರಿಸುತ್ತಿರುವ ಹಿನ್ನೆಲೆ ಬಹುತೇಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಊರಿನಲ್ಲಿ ಇದ್ದಾರೆ. ಸಾರ್ವಜನಿಕವಾಗಿ ಹೋಳಿ ಆಚರಣೆಯಿಂದ ರೋಗ ಹರಡುವಿಕೆ ಪ್ರಮಾಣ ಹೆಚ್ಚಾಗಿರುವುದರಿಂದ, ತಾವು ಕಲಿತ ಶಾಲೆಗೆ ಬಣ್ಣ ಹಚ್ಚುವ ಮೂಲಕ ಹಬ್ಬ ಆಚರಿಸಿದರು. ಐದು ದಶಕಗಳಿಂದ ಬಣ್ಣವೇ ಕಾಣದೆ ಮಾಸಿ ಹೋಗಿ ಆಸ್ವಚ್ಛತೆಯ ಸ್ಥಳವಾಗಿ ಮಾರ್ಪಟ್ಟಿದ್ದ ಶಾಲಾ ಆವರಣವನ್ನು ಸುಮಾರು 50ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಸೇರಿ ಸ್ವಚ್ಛಗೊಳಿಸಿದ್ದಾರೆ.