ರಾಯಚೂರು: ಹವಾಮಾನ ಇಲಾಖೆಯ ಎಚ್ಚರಿಕೆ ನಗರದ ತಗ್ಗು ಪ್ರದೇಶದ ಜನರ ನಿದ್ದೆಗೆಡಿಸಿದೆ. ಕಳೆದ ರಾತ್ರಿ ಸುರಿದ ಮಳೆಗೆ ಮನೆಯಲ್ಲಿ ನೀರು ನುಗ್ಗಿದ್ದು, ಜಿಲ್ಲಾಧಿಕಾರಿಗಳು ನೀಡಿದ ಆಶ್ವಾಸನೆಯೂ ಈಡೇರಿಲ್ಲ, ಅವೈಜ್ಞಾನಿಕ ಚರಂಡಿ ಕಾಮಗಾರಿ ದುರಸ್ತಿಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ನಗರದ ತಗ್ಗು ಪ್ರದೇಶಗಳಾದ ಸೀಯಾತಲಾಬ, ಕಾಕಿನ ಕೆರೆ, ಭಸವನಭಾವಿ ವೃತ್ತ, ನೀರಬಾವಿ ಕುಂಟೆ ಸೇರಿದಂತೆ ಇತರೆ ತಗ್ಗು ಪ್ರದೇಶಗಳಲ್ಲಿ ಈಗಾಗಲೇ ಮಳೆ ನೀರು ನುಗ್ಗಿ ಜನ ಕಂಗಾಲಾಗಿದ್ದಾರೆ. ಮುಂದಿನ 4 ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಇಲ್ಲಿನ ಜನತೆಗೆ ಮತ್ತೊಂದು ಆತಂಕ ಎದುರಾಗಿದೆ.
ಕಳೆದ ತಿಂಗಳು ಸುರಿದಿದ್ದ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದಾಗ ಜಿಲ್ಲಾಡಳಿತದಿಂದ ಗಂಜಿ ಕೇಂದ್ರ ಪ್ರಾರಂಭಿಸಲಾಗಿತ್ತು. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ಜಿಲ್ಲಾಧಿಕಾರಿಗಳು ಸ್ವತಃ ವೀಕ್ಷಿಸಿ ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗದ ಹಾಗೆ ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಚರಂಡಿಗಳನ್ನು ಒಂದು ವಾರದಲ್ಲಿ ದುರಸ್ತಿಗೊಳಿಸಲು ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದ್ದರು. ಆದರೆ ದಿನಗಳು ಕಳೆದವು ಹೊರತು ಅಧಿಕಾರಿಗಳಿಂದ ಯಾವುದೇ ರೀತಿಯ ಕಾಮಗಾರಿಗಳು ನಡೆದಿಲ್ಲ. ಕಳೆದ ರಾತ್ರಿ ಸುರಿದ ಮಳೆಯಿಂದ ಮತ್ತೆ ಮನೆಗಳಿಗೆ ನೀರು ನುಗ್ಗಿದೆ.
ರಾಯಚೂರಿನಲ್ಲಿ ಮುಂದಿನ 4 ದಿನ ಭಾರೀ ಮಳೆ: ಹವಾಮಾನ ಇಲಾಖೆ .. ನಗರದ ಸಿಯಾತಲಾಬ್ ನಿವಾಸಿ ಅಜಯ ಮಾತನಾಡಿ, ಈ ಪ್ರದೇಶದಲ್ಲಿ ಸಣ್ಣ ಮಳೆಯಾದರು ಸಾಕು ಮನೆಗಳಿಗೆ ನೀರು ನುಗ್ಗುತ್ತದೆ. ಕಳೆದ ತಿಂಗಳು ಸುರಿದ ಮಳೆಯಿಂದ ಅಪಾರ ಪ್ರಮಾಣದ ಹಾನಿಯಾಗಿತ್ತು. ಮನೆಯಲ್ಲಿ ಇರುವ ದವಸ ಧಾನ್ಯಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಇದೀಗ ಮತ್ತೆ 4 ದಿನ ಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ. ಜಿಲ್ಲಾಧಿಕಾರಿ ನೀಡಿರುವ ಆಶ್ವಾಸನೆಯು ಈಡೇರಿಲ್ಲ. ಮಳೆಗಾಲದಲ್ಲಿ ಪ್ರತಿನಿತ್ಯ ಮನೆಯಿಂದ ನೀರು ಹೊರ ಹಾಕುವುದೇ ಒಂದು ಕಾಯಕವಾಗಿದ್ದು, ಅವೈಜ್ಞಾನಿಕ ಚರಂಡಿ ಕಾಮಗಾರಿ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.