ರಾಯಚೂರು: ಶಂಕಿತ ಕೊರೊನಾ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಇಂದು ಹೊಸದಾಗಿ ನಾಲ್ವರು ವ್ಯಕ್ತಿಗಳ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಕೊರೊನಾ ಶಂಕೆ: ರಾಯಚೂರಲ್ಲಿ ಮತ್ತೆ ನಾಲ್ವರ ರಕ್ತ, ಗಂಟಲು ದ್ರವದ ಮಾದರಿ ಲ್ಯಾಬ್ಗೆ ರವಾನೆ - ಕೊರೊನಾ ಶಂಕೆ
ಕೊರೊನಾ ಸೋಂಕು ದಿನ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇಂದು ರಾಯಚೂರಿನಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದ ನಾಲ್ವರು ವ್ಯಕ್ತಿಗಳ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಜಿಲ್ಲೆಯಿಂದ ಈವರೆಗೆ ಒಟ್ಟು 104 ಜನರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ಅದರಲ್ಲಿ 71 ಜನರ ಮಾದರಿ ನೆಗೆಟಿವ್ ಬಂದಿದ್ದು, ಇನ್ನೂ 33 ಜನರ ವರದಿ ಬರುವುದು ಬಾಕಿಯಿದೆ. ಪಕ್ಕದ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಿಲ್ಲೆಗೆ ಆಗಮಿಸುತ್ತಿರುವುದರಿಂದ ಸರ್ಕಾರಿ ಕಟ್ಟಡದಲ್ಲಿ ದಿಗ್ಬಂಧನದಲ್ಲಿರುವ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ಗುರುವಾರ 90 ಜನರನ್ನು ದಿಗ್ಬಂಧನದಲ್ಲಿ ಇರಿಸಲಾಗಿದೆ. ಈ ಮೂಲಕ ಒಟ್ಟು 322 ಜನರನ್ನು ದಿಗ್ಬಂಧನಕ್ಕೆ ಒಳಪಡಿಸಿದಂತಾಗಿದೆ.
ಶಂಕಿತ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಗುರುವಾರ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಟ್ಟು 28 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.