ರಾಯಚೂರು: ಮಾನವಿ ತಾಲೂಕಿನಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ನಿಖಿಲ್ ಬಿ ಹೇಳಿದ್ದಾರೆ. ಜಿಲ್ಲೆಯ ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದ ಹತ್ತಿರ ಪ್ರಸಾದ್ (40) ಎನ್ನುವರನ್ನು ಸೋಮವಾರ ಬೆಳಗ್ಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಈ ಪ್ರಕರಣದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ನಿಖಿಲ್ ಬಿ ಮಾಧ್ಯಮದವರೊಂದಿಗೆ ಮಾತನಾಡಿ, "ಪ್ರಸಾದ್ ಎನ್ನುವ ವ್ಯಕ್ತಿಯನ್ನು ನಾಲ್ಕು ಜನ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ವಿ ಠಾಣೆಯಲ್ಲಿ 12 ಮಂದಿಯ ವಿರುದ್ಧ ದೂರು ನೀಡಿದ್ದು, ಎಫ್ಐಆರ್ ದಾಖಲಿಸಿಕೊಂಡಿದ್ದೇವೆ. ಪ್ರಕರಣದ ತನಿಖೆಗಾಗಿ ನಾವು ಮೂರು ವಿಶೇಷ ತಂಡಗಳನ್ನು ರಚೆನ ಮಾಡಿದ್ದೇವೆ. ಆದಷ್ಟು ಬೇಗ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗುವುದು. ರೈತ ಹಾಗೂ ಸಮಾಜಸೇವಕನಾಗಿದ್ದ ಪ್ರಸಾದ್ ಕೆಲವು ಸಂಘಟನೆಗಳಲ್ಲೂ ಕಾಣಿಸಿಕೊಂಡಿದ್ದರು" ಎಂದು ಹೇಳಿದರು.
"ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸಂಬಂಧಿಸಿದಂತೆ ಈ ಗಲಾಟೆ ನಡೆದಿದೆ ಎನ್ನುವ ಬಗ್ಗೆ ಎಫ್ಐಆರ್ನಲ್ಲಿ ಯಾವುದೇ ಮಾಹಿತಿ ಇಲ್ಲ. ಅದರಲ್ಲಿ ಹಳೇ ವೈಷಮ್ಯಕ್ಕೆ ಈ ಕೊಲೆ ಮಾಡಲಾಗಿದೆ ಎಂದು ಎನ್ನಲಾಗುತ್ತಿದೆ. ಈ ಕೊಲೆಯ ಹಿಂದಿನ ಉದ್ದೇಶ ಏನು ಎನ್ನುವುದು ಮುಂದಿನ ತನಿಖೆಯಿಂದಷ್ಟೇ ಬಯಲಾಗಬೇಕಿದೆ. ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ ಮೇಲೆ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ. ನಮ್ಮಲ್ಲಿ ಒಬ್ಬರು ಪ್ರತ್ಯಕ್ಷದರ್ಶಿ ಇದ್ದು, ಯಾವ ರೀತಿ ದುಷ್ಕರ್ಮಿಗಳು ಬಂದು ಪ್ರಸಾದ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವುದರ ಬಗ್ಗೆ ಈಗಾಗಲೇ ಹೇಳಿದ್ದಾರೆ. ಆರೋಪಿಗಳನ್ನು ಗುರುತಿಸಿದ್ದಾರೆ ಕೂಡ, ಅದರ ಆಧಾರದಲ್ಲೇ ನಾವು ಎಫ್ಐಆರ್ ದಾಖಲಿಸಿದ್ದೇವೆ. ಅವರು ನೀಡಿರುವ ಮಾಹಿತಿಯನ್ನು ಆಧರಿಸಿ ತನಿಖೆ ಕೈಗೊಳ್ಳಲಾಗುವುದು. ಆರೋಪಿಗಳ ಶೋಧ ಕಾರ್ಯ ನಡೆದಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು." ಎಂದು ತಿಳಿಸಿದರು.